ಬೆಂಗಳೂರು, ಎ.25 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಅವರ ಕಾರ್ಯಕ್ರಮವನ್ನು ಕಾಂಗ್ರೆಸ್ ಟೀಕೆ ಮಾಡಿದ್ದು, "ಕರೋನಾ ಸಂಕಟದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಇಷ್ಟು ದಿನ ಮಾಡಿದ್ದು, ಚುನಾವಣಾ ಸಭೆಗಳಲ್ಲಿ ಭಾಷಣ್ ಕಿ ಬಾತ್ ಇಂದು ಗೋಡೆಗಳ ಮದ್ಯೆ ಕುಳಿತು ಮನ್ ಕಿ ಬಾತ್" ಎಂದಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕರೋನಾ ಸಂಕಟದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಇಷ್ಟು ದಿನ ಮಾಡಿದ್ದು, ಚುನಾವಣಾ ಸಭೆಗಳಲ್ಲಿ ಭಾಷಣ್ ಕಿ ಬಾತ್ ಇಂದು ಗೋಡೆಗಳ ಮದ್ಯೆ ಕುಳಿತು ಮನ್ ಕಿ ಬಾತ್. ಸಾವಿನ ಮನೆಗೆ ಹೊರಟವರನ್ನು ಉಳಿಸುವ ಕೆಲಸವಾಗಬೇಕೇ ಹೊರತು, ಬರೀ ಮಾತುಗಳ ಬೊಗಳೆ ಪ್ರಲಾಪವಲ್ಲ" ಎಂದಿದೆ.
"ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಚಾಣಾಕ್ಷತನದಿಂದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕಲೆ ಸಿದ್ಧಿಸಿಕೊಂಡಿದ್ದಾರೆ. ಸಿದ್ಧತೆ ಬಗ್ಗೆ ಏನೇ ಕೇಳಿದರೂ ಉತ್ತರಿಸುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಡಾ.ಪರಕಾಲ ಪ್ರಭಾಕರ್ ಅವರು ಬಿಜೆಪಿ ಸರ್ಕಾರದ ಹೊಣೆಗೇಡಿತನವನ್ನು ಕಟುವಾಗಿ ಟೀಕಿಸಿದ್ದಾರೆ" ಎಂದು ಹೇಳಿದೆ.
"ಈಗಲ್ಲದೆ ಇನ್ಯಾವಾಗ? ಕಳೆದ 7 ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿ ನಡೆಸಲಿಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಶವಗಳ ಜಾತ್ರೆ ನಡೆಯುತ್ತಿದೆ ಆಮ್ಲಜನಕವಿಲ್ಲದೆ ದೇಶದ ಉಸಿರುಗಟ್ಟಿದೆ. ಎಲ್ಲೋ ಅಡಗಿ ಕುಳಿತು, ಯಾರೋ ಬರೆದ ಸ್ಕ್ರಿಪ್ನ ಮನ್ಕೀ ಬಾತ್ ಎಂದು ಓದುವ ಬದಲು ಪತ್ರಿಕಾಗೋಷ್ಠಿ ನಡೆಸಿ ಉತ್ತರಿಸುವ ಸಮಯ ಈಗಲ್ಲದೆ ಇನ್ಯಾವಾಗ ಬಿಜೆಪಿ?" ಎಂದು ಪ್ರಶ್ನಿಸಿದೆ.
"ಸಿಎಂ ಬಿಎಸ್ವೈಅವರೇ ಮೋದಿಯವರು ನಾಲ್ಕಾಣೆ ಕೊಟ್ಟಿದ್ದಕ್ಕೆ ಎಂಟಾಣೆ ಬಹುಪರಾಕ್ ಹಾಕ್ತಿದ್ದಿರಲ್ಲ ಸ್ವಾಮಿ! ಆಕ್ಸಿಜನ್, ನೀವು ಕೇಳಿದ್ದು - 1000 ಟನ್, ಕೊಡುತ್ತಿರುವುದು - 800 ಟನ್. ರೆಮಡಿಸಿವಿರ್, ಅಗತ್ಯವಿದ್ದಿದ್ದು - 2 ಲಕ್ಷ ವಯಲ್ಸ್, ಕೊಡುತ್ತಿರುವುದು - 1.22 ಲಕ್ಷ ವಯಲ್ಸ್. ರಾಜ್ಯ ನರಳುತ್ತಿದೆ, ಮೋದಿ ಗಡ್ಡ ಹಿಡಿದು ನೇತಾಡುವುದನ್ನ ಬಿಡಿ" ಎಂದು ವ್ಯಂಗ್ಯವಾಡಿದೆ.
"ಕೋವಿಶೀಲ್ಡ್ ಸರ್ಕಾರಿ ಆಸ್ಪತ್ರೆಗಳಲ್ಲಿ - ₹400, ಖಾಸಗಿ ಆಸ್ಪತ್ರೆಗಳಲ್ಲಿ - ₹600, ಕೋವ್ಯಾಕ್ಸಿನ್ ಸರ್ಕಾರಿ ಆಸ್ಪತ್ರೆಗಳಲ್ಲಿ - ₹600, ಖಾಸಗಿ ಆಸ್ಪತ್ರೆಗಳಲ್ಲಿ - ₹1200. ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ, ಈ ಮೊತ್ತ ಭರಿಸಲು ಸಾಧ್ಯವಿಲ್ಲ, ಸರ್ವರಿಗೂ ಉಚಿತ ಲಸಿಕೆಯ ಘೋಷಣೆ ಮಾಡಿ" ಎಂದು ಒತ್ತಾಯಿಸಿದೆ