ಬೆಂಗಳೂರು, ಏ.25 (DaijiworldNews/MB) : ''ಕೊರೊನಾ ಸೋಂಕು ರಾಜ್ಯದಲ್ಲಿ ಅಧಿಕವಾಗುತ್ತಿರುವ ಹಿನ್ನೆಲೆ ಕೊರೊನಾ ನಿಯಂತ್ರಣ ಮಾಡಲು ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಕೂಡ ಜಾರಿಗೊಳಿಸಲಾಗಿದೆ. ಆದರೆ ನಿನ್ನೆ ಒಂದು ದಿನವೇ 30 ಸಾವಿರ ಕೊರೊನಾ ಪಾಸಿಟಿವ್ ಆಗಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಅಗತ್ಯಬಿದ್ದರೆ ವೀಕೆಂಡ್ ಲಾಕ್ಡೌನ್ ಮುಂದುವರಿಕೆ ಮಾಡಲಾಗುವುದು'' ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಕೊರೊನಾ ನಿರ್ವಹಣೆ ಬಗ್ಗೆ ಭಾನುವಾರ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಎಂಎಲ್ಸಿ ನಾರಾಯಣಸ್ವಾಮಿ ಅವರೊಂದಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಕೊರೊನಾ ಸೋಂಕು ಮೂರನೇ ಅಲೆ ಆರಂಭವಾಗಬಾರದು ಎಂದಾದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಎಲ್ಲರಿಗೂ ಲಸಿಕೆ ಹಾಕಿಸುವುದು ನಮ್ಮ ಜವಾಬ್ದಾರಿ'' ಎಂದು ಹೇಳಿದ್ದಾರೆ.
''ವೀಕೆಂಡ್ ಕರ್ಪ್ಯೂ ಬಗ್ಗೆ ಸಂಪುಟದ ಸಚಿವರ ಜೊತೆ ಚರ್ಚಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಕೈಗೊಳ್ಳುತ್ತಾರೆ. ಅಗತ್ಯಬಿದ್ದರೆ ವೀಕೆಂಡ್ ಕರ್ಫ್ಯೂ ಮುಂದುವರೆಸುತ್ತೇವೆ. ಅದು ಅವರಿಗೆ ಬಿಟ್ಟಿದ್ದು'' ಎಂದರು.
''ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ನೆರವು, ಆಕ್ಸಿಜನ್, ರೆಮಿಡಿಸಿವಿರ್ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಹೆಚ್ಚಿನ ಕೊರೊನಾ ಲಸಿಕೆಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಕೇಂದ್ರ ಸರ್ಕಾರ ನೀಡಲಿದೆ'' ಎಂದಿದ್ದಾರೆ.