ಬೆಂಗಳೂರು, ಏ.25 (DaijiworldNews/MB) : 'ಟೀಕಾ ಉತ್ಸವ್' ನಂತಹ ಬಾಯಿ ಬಡಾಯಿಯನ್ನು ಬಿಟ್ಟಾಕಿ ಮೊದಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಲಸಿಕೆ ಪಡೆಯುವುದನ್ನು ಪ್ರೊತ್ಸಾಹಿಸಬೇಕಾದ ಬಿಜೆಪಿ ಸರ್ಕಾರ, ಅದರ ಬೆಲೆ ಏರಿಸಿ ಜನತೆ ಅದನ್ನು ಪಡೆಯದಂತೆ ಮಾಡಲು ಹೊರಟಿದೆ. ನರೇಂದ್ರ ಮೋದಿ ಅವರೇ, 'ಟೀಕಾ ಉತ್ಸವ್' ನಂತಹ ಬಾಯಿ ಬಡಾಯಿಯನ್ನು ಬಿಟ್ಟಾಕಿ ಮೊದಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ'' ಎಂದು ಆಗ್ರಹಿಸಿದ್ದಾರೆ.
''ಅನ್ನಭಾಗ್ಯ ಯೋಜನೆ ಎಂದರೆ ಉರ್ಕೊಳ್ಳುತ್ತಿದ್ದ ಮತ್ತು ಆ ಯೋಜನೆಗೆ ಕಲ್ಲು ಹಾಕಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು, ಈಗ ಪ್ರಧಾನಿ ಘೋಷಿಸಿರುವ ಎರಡು ತಿಂಗಳ ಕಾಲ ಐದು ಕಿಲೋ ಅಕ್ಕಿ ನೀಡುವ ಯೋಜನೆಯನ್ನು ಕೊಂಡಾಡುತ್ತಿರುವುದು ತಮಾಷೆಯಾಗಿದೆ'' ಎಂದು ಹೇಳಿದ್ದಾರೆ.
''ಕೊರೊನಾದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಹತ್ತು ಕಿಲೋ ಅಕ್ಕಿ ನೀಡಬೇಕೆಂದು ಪ್ರಾರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಪ್ರಧಾನಿ ಈಗಲಾದರೂ ಎಚ್ಚೆತ್ತುಕೊಳ್ಳಿ. ಕೊರೊನಾ ಕಷ್ಟ ಕೊನೆಯಾಗುವವರೆಗಾದರೂ ಹತ್ತು ಕಿಲೋ ಅಕ್ಕಿ ನೀಡಿ ಪುಣ್ಯ ಕಟ್ಕೊಳ್ಳಿ'' ಎಂದು ಹೇಳಿದ್ದಾರೆ.
''ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ರಾಜ್ಯ ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ತಿಂಗಳಿಗೆ ಐದು ಕಿಲೋ ಅಕ್ಕಿ ಬದಲಿಗೆ ಎರಡು ಕಿಲೋ ಅಕ್ಕಿ ನೀಡುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರೇ, ಈ ಅನ್ಯಾಯವನ್ನು ತಕ್ಷಣ ಸರಿಪಡಿಸಿ. ಬಡವರ ಶಾಪಕ್ಕೆ ಈಡಾಗಬೇಡಿ'' ಎಂದು ವಾಗ್ದಾಳಿ ನಡೆಸಿದ್ದಾರೆ.
''ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವ ಉದ್ದೇಶದಿಂದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಅವೆಲ್ಲವನ್ನೂ ಬಡವರ ವಿರೋಧಿ ಬಿಜೆಪಿ ಸರ್ಕಾರ ನಿಲ್ಲಿಸಲು ಹೊರಟಿದೆ. ಅವುಗಳಿಗೆ ಅಡ್ಡಗಾಲು ಹಾಕಿದರೆ ಬಡವರ ಶಾಪ ತಟ್ಟದೆ ಇರದು'' ಎಂದು ಕಿಡಿಕಾರಿದ್ದಾರೆ.
''ಔಷಧಿ,ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು ಪ್ರಧಾನಿ ಮೋದಿ ಅವರನ್ನು ಬೇಡುತ್ತಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಕಂಡಾಗ ಕನಿಕರ ಮೂಡುತ್ತಿದೆ. 25 ಬಿಜೆಪಿ ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಅವರನ್ನು ದೆಹಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ'' ಎಂದು ಹೇಳಿದ್ದಾರೆ.
''ಪಿಎಂ ಗರಿಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರಕಾರವು 5 ಕೆಜಿ ಉಚಿತ ಆಹಾರ ಧಾನ್ಯವನ್ನು ಮೇ ಮತ್ತು ಜೂನ್ ತಿಂಗಳಿನಲ್ಲಿ ಸುಮಾರು 80 ಕೋಟಿ ಬಡ ಜನರಿಗೆ ಉಚಿತವಾಗಿ ನೀಡಲಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿಳಿಸಿದ್ದಾರೆ.