ನವದೆಹಲಿ, ಏ.25 (DaijiworldNews/HR): "ಕೊರೊನಾ ನಮ್ಮ ಧೈರ್ಯವನ್ನು ಪರೀಕ್ಷೆ ಮಾಡುತ್ತಿದ್ದು, ಇದನ್ನು ತಡೆಯಲು ನಾನು ಲಸಿಕೆ ಉತ್ಪಾದನೆ, ವೈದ್ಯರ ಜೊತೆ ಮಾತನಾಡಿದ್ದೇನೆ" ಎಂದು ಮನ್ ಕೀ ಬಾತ್ ತಿಂಗಳ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬೈನ ವೈದ್ಯರಾದ ಡಾ.ಶಶಾಂಕ್ ಜೊತೆ ಮೋದಿ ಮನ್ ಕೀ ಬಾತ್ನಲ್ಲಿ ಕೊರೊನಾ 2ನೇ ಅಲೆ ಬಗ್ಗೆ ಮಾತನಾಡಿದ್ದು, "ಮೊದಲಿಗಿಂತ ವೇಗದಲ್ಲಿ 2ನೇ ಅಲೆ ಹೆಚ್ಚುತ್ತಿದೆ. ಗುಣಮುಖ ಕೂಡಾ ಬೇಗ ಆಗುತ್ತಿದ್ದಾರೆ. ರೆಮ್ಡೆಸಿವಿರ್ ಲಸಿಕೆ ಹಿಂದೆ ಜನರು ಓಡುವುದನ್ನು ನಿಲ್ಲಿಸಬೇಕು, ಅನೇಕ ರೀತಿಯ ಚಿಕಿತ್ಸೆಗಳನ್ನು ನಾವು ನೀಡುತ್ತಿದ್ದೇವೆ. ವಿಶ್ವದ ವಿವಿಧ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಗುಣಮುಖ ಪ್ರಮಾಣವೂ ಹೆಚ್ಚಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ" ಎಂದು ಡಾ.ಶಶಾಂಕ್ ಹೇಳಿದ್ದಾರೆ.
ಇನ್ನು ಶ್ರೀನಗರದ ಡಾ. ನವೀದ್ ಕೂಡ ಮೋದಿ ಅವರೊಂದಿಗೆ ಮನ್ ಕೀ ಬಾತ್ ಮೂಲಕ ಮಾತನಾಡಿದ್ದು, "ಮೊದಲ ಅಲೆಗೆ ಹೋಲಿಕೆ ಮಾಡಿದರೆ ಜನರಲ್ಲಿ ಕೊರೊನಾ ಕುರಿತ ಆತಂಕ ಕಡಿಮೆ ಆಗಿದೆ. ಕೊರೊನಾ ಲಸಿಕೆ ಪಡೆದ ಮೇಲೆಯೂ ಜನರಿಗೆ ಸೋಂಕು ತಗುಲಬಹುದು. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಕುರಿತು ಹಲವು ಸುಳ್ಳು ವದಂತಿಗಳು ಹರಿದಾಡುತ್ತಿವೆ" ಎಂದು ಡಾ. ನವೀದ್ ಹೇಳಿದರು.
"ಕೊರೊನಾ ಲಸಿಕೆ ಕುರಿತಂತೆ ಊಹಾಪೋಹಗಳನ್ನು ನಂಬಬೇಡಿ, ವಿಶ್ವಾಸಾರ್ಹ ಸುದ್ದಿಗಳನ್ನು ಮಾತ್ರ ನಂಬಿ. ಎಲ್ಲರಿಗೂ ಲಸಿಕೆ ಮಹತ್ವದ ಬಗ್ಗೆ ತಿಳಿಯುತ್ತಿದೆ. ಉಚಿತ ಲಸಿಕೆ ಕಾರ್ಯಕ್ರಮ ಜಾರಿಯಲ್ಲಿರಲಿದ್ದು, ರಾಜ್ಯಗಳು ಲಸಿಕೆ ಸೌಲಭ್ಯ ಜನರಿಗೆ ತಲುಪಿಸಲಿ. ಜೊತೆಗೆ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರದ ಉಚಿತ ಲಸಿಕೆ ಯೋಜನೆ ಮುಂದುವರಿಯಲಿದ್ದು, ಮೇ. 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತೆ. ಲಸಿಕೆಯ ಮಹತ್ವದ ತಜ್ಞರ ಸಲಹೆಗಳನ್ನು ಪಾಲಿಸಬೇಕು" ಎಂದು ಮೋದಿ ಹೇಳಿದ್ದಾರೆ.
"ಭಾರತದ ಉಚಿತ ಲಸಿಕೆ ಕಾರ್ಯಕ್ರಮವು ಭವಿಷ್ಯದಲ್ಲಿಯೂ ಮುಂದುವರಿಯಲಿದ್ದು, ಈ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮದ ಪ್ರಯೋಜನಗಳನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸುವಂತೆ ರಾಜ್ಯ ಸರ್ಕಾರಗಳಿಗೆ ವಿನಂತಿಸುತ್ತಿದ್ದೇನೆಂದು. ಕೊರೊನಾ ವಿರುದ್ಧದ ಹೋರಾಟಲ್ಲಿ ಆ್ಯಂಬುಲೆನ್ಸ್ ಚಾಲಕರ ಸಹಕಾರ ಅತ್ಯುನ್ನತವಾಗಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.
ಇನ್ನು "ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ನೀಡಲು ಇದನ್ನು ಉಪಯೋಗಿಸಿಕೊಳ್ಳಬಹುದು" ಎಂದು ಹೇಳಿದ್ದಾರೆ.