ನವದೆಹಲಿ, ಏ.25 (DaijiworldNews/MB) : ಕೊರೊನಾ ಸೋಂಕು ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿ ಮಾಡಿದ ಸುಮಾರು 50 ಟ್ವೀಟ್ಗಳನ್ನು ಶನಿವಾರ ಟ್ವಿಟರ್ ಅಳಿಸಿಹಾಕಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಕೊರೊನಾ ಸೋಂಕು ಹೆಚ್ಚಳ ಹಾಗೂ ಕುಂಭಮೇಳದ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿ ಮಾಡಿರುವ ಟ್ವೀಟ್ಗಳನ್ನೇ ಅಳಿಸಿ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿ ಹಾಗೂ ಪಶ್ಚಿಮ ಬಂಗಾಳದ ಸಚಿವ ಮಲಯ್ ಘಟಕ್ ಸೇರಿದಂತೆ ಹಲವು ಜನರ ಟ್ವೀಟ್ಗಳನ್ನು ಡಿಲೀಟ್ ಮಾಡಲಾಗಿದೆ. ಇನ್ನು ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಟ್ವೀಟರ್ ಈ ಟ್ವೀಟ್ಗಳನ್ನು ಅಳಿಸಿ ಹಾಕಿದೆ ಎಂದು ಹೇಳಲಾಗಿದೆ.
ಈ ಹಿಂದೆ ಕೃಷಿ ಕಾಯ್ದೆಗಳ ವಿರೋಧಿಸಿ ರೈತರು ನಡೆಸಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಡಲಾಗಿರುವ ಟ್ವೀಟ್ಗಳನ್ನು ಅಳಿಸುವಂತೆ ಟ್ವಿಟರ್ಗೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿತ್ತು. ಆದರೆ ಟ್ವಿಟರ್ ಈ ರೀತಿ ಸರ್ಕಾರವೊಂದರ ಆಜ್ಞೆಯ ಮೇರೆಗೆ ಟ್ವೀಟ್ಗಳನ್ನು ಅಳಿಸಿಹಾಕಲು ನಿರಾಕರಿಸಿತ್ತು. ಬಳಿಕ ಭಾರತದ ಕಾನೂನು ಪಾಲಿಸಲು ವಿಫಲವಾದರೆ ಗಂಭೀರ ಪರಿಣಾಮಗಳ ಎದುರಿಸಬೇಕಾದೀತು ಎಂದು ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ವಿಟರ್ ರೈತ ಪ್ರತಿಭಟನೆ ಸಂಬಂಧಿಸಿದ ಹಲವು ಟ್ವೀಟ್ಗಳನ್ನು ಅಳಿಸಿತ್ತು.