ಬೆಂಗಳೂರು, ಏ.25 (DaijiworldNews/MB) : ವೀಕೆಂಡ್ ಕರ್ಫ್ಯೂ ಯಶಸ್ವಿಯಾದ ಬೆನ್ನಲ್ಲೇ ಸರ್ಕಾರವು ಮತ್ತೆ 15 ದಿನ ಕರ್ಫ್ಯೂ ವಿಸ್ತರಣೆ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹೇರಲಾಗಿದ್ದು ಇದರ ಯಶಸ್ವಿ ಕಾರಣ ಮುಂದಿನ ಒಂದು ತಿಂಗಳು ವೀಕೆಂಡ್ ಕರ್ಫ್ಯೂ ಅಥವಾ ಹದಿನೈದು ದಿನ ಪೂರ್ಣ ಪ್ರಮಾಣದ ಲಾಕ್ಡೌನ್ ವಿಧಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ವೀಕೆಂಡ್ ಕರ್ಫ್ಯೂ ಅಥವಾ ಲಾಕ್ಡೌನ್ ಬಗ್ಗೆ ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಸೋಮವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಬಗ್ಗೆ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಸದ್ಯದ ಪರಿಸ್ಥಿತಿ ಅವಲೋಕಿಸಿದಾಗ ಸೋಮವಾರದಿಂದ ಕರ್ಫ್ಯೂ ಮುಂದುವರಿಸಿದರೂ ಉತ್ತಮ ಎಂದು ಸರ್ಕಾರದ ಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿರುವುದು ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಇನ್ನು ಬಹುತೇಕ ಸಚಿವರು ವೀಕೆಂಡ್ ಕರ್ಫ್ಯೂ ಮುಂದುವರಿಕೆಗೆ ಒಲವು ತೋರಿದ್ದು ತಜ್ಞರು ಲಾಕ್ಡೌನ್ಗೆ ಸಲಹೆ ನೀಡಿದರೆ ಒಪ್ಪಿಗೆ ನೀಡುವುದು ಒಳಿತು ಎಂದು ಕೆಲವರು ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಂದ ಸೋಮವಾರ ಸಂಪುಟ ಸಭೆಯಲ್ಲಿ ಆಯಾ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಬಳಿಕ ಈ ಬಗ್ಗೆ ತಾಂತ್ರಿಕ ಸಮಿತಿಯ ಸದಸ್ಯರೊಂದಿಗೂ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಏತನ್ಮಧ್ಯೆ ಲಾಕ್ಡೌನ್ಗೆ ಕೈಗಾರಿಕೆ ಮತ್ತು ವಾಣಿಜ್ಯ ವಲಯದಿಂದ ತೀವ್ರ ವಿರೋಧವಿದೆ. ಒಂದು ವೇಳೆ ಲಾಕ್ಡೌನ್ ಮಾಡುವುದೇ ಆದರೆ ಕೂಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳ ಸಹಿತ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸಿದೆ.