ಬೆಂಗಳೂರು, ಏ.25 (DaijiworldNews/MB) : ಇಲ್ಲಿನ ಆಸ್ಪತ್ರೆಯೊಂದರಲ್ಲಿ 61 ವರ್ಷದ ಕೊರೊನಾ ರೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತರನ್ನು ಬೆಂಗಳೂರಿನ ಸುಂಕದಕಟ್ಟೆಯ ಅಂಜನಾ ನಗರ ನಿವಾಸಿ ರಾಮಣ್ಣ ಎಂದು ಗುರುತಿಸಲಾಗಿದೆ.
ಮೂರು ವೆಂಟಿಲೇಟರ್ಗಳನ್ನು ಹೊಂದಿರುವ 50 ಹಾಸಿಗೆಗಳಿರುವ ವಿಜಯನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕೊರೊನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಡೆತ್ನೋಟ್ ಕೂಡಾ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, "ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿಕೊಳ್ಳುತ್ತಾರೆ. ಆದರೆ ರಾತ್ರಿ 11.30 ಕ್ಕೆ (ಶುಕ್ರವಾರ) ಸಂತೋಷದಿಂದ ಇದ್ದರು ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಯು ರೋಗಿಯ ಆರೋಗ್ಯ ಸ್ಥಿತಿ ಪರಿಶೀಲನೆಗೆ ತಡ ರಾತ್ರಿ ಸುಮಾರು 1 ಗಂಟೆಗೆ ಅವರು ದಾಖಲಾಗಿದ್ದ ಐಸಿಯು ವಿಭಾಗಕ್ಕೆ ತೆರಳಿದಾಗ ಒಳಗಡೆಯಿಂದ ಲಾಕ್ ಮಾಡಲಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಬಲವಂತವಾಗಿ ಬಾಗಿಲನ್ನು ತೆರೆದಾಗ ಸೋಂಕಿತ ರೋಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯಿಂದ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಸೋಂಕಿತ ವ್ಯಕ್ತಿಯು ಚೇತರಿಕೆ ಕಾಣುತ್ತಿದ್ದರು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಈ ಹಿನ್ನೆಲೆ ಅವರನ್ನು ಶುಕ್ರವಾರ ಆಸ್ಪತ್ರೆಯು ಐಸಿಯುನಿಂದ ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿತ್ತು ಎಂದು ಕೂಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.