ತಿರುವನಂತಪುರಂ ಏ24(DaijiworldNews/SB): ಕಳೆದ ಎರಡು ದಿನಗಳ ಹಿಂದೆ ಕೇರಳದಲ್ಲಿ ಆರಂಭವಾದ ವ್ಯಾಕ್ಸಿನ್ ಚಾಲೆಂಜ್ ಅಭಿಯಾನವು ವಿಶೇಷ ಜನಮನ್ನಣೆ ಪಡೆಯುತ್ತಿದ್ದು ಈ ಮೂಲಕ ಕೋಟಿಗಟ್ಟಲೆ ದುಡ್ಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹರಿದು ಬರುತ್ತಿದೆ. ಈ ನಡುವೆ ಇಳಿ ವಯಸ್ಸಿನ ಬೀಡಿ ಕಾರ್ಮಿಕರೋರ್ವರು ತನ್ನ ಜೀವಮಾನದ ಗಳಿಕೆಯನ್ನೆಲ್ಲಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಿ ಎಲ್ಲರನ್ನೂ ದಿಘ್ಬ್ರಮೆಗೊಳಿಸಿದ್ದಾರೆ
ಕಣ್ಣೂರು ಜಿಲ್ಲೆಯ ಹೆಸರು ಹೇಳಬಯಸದ, ಬೀಡಿ ಸುತ್ತುವ ಕಾಯಕ ಮಾಡುತ್ತಿದ್ದ 70 ವರ್ಷದ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಲ್ಲಿ ಜೀವಮಾನದ ಗಳಿಕೆಯಾದ ರೂ 2,00,850 ವನ್ನು ಉಳಿಸಿಕೊಂಡಿದ್ದರು. ಈ ಉಳಿಕೆಯಿಂದ ಎರಡು ಲಕ್ಷ ರೂಪಾಯಿಗಳನ್ನು ಪರಿಹಾರ ನಿಧಿಗೆ ವರ್ಗಾವಣೆ ಮಾಡಿ ಎಂದಾಗ ನಿಮಿಷಕೊಮ್ಮೆ ಎಂಬಂತೆ ಬ್ಯಾಂಕ್ ನೌಕರರು ಬೆಚ್ಚಿ ಬಿದ್ದಿದ್ದರು. ಕಣ್ಣೂರು ಕೇರಳ ಬ್ಯಾಂಕಿನ ನೌಕರನಾದ ಸಿ ಪಿ ಸೌಂದರ್ ರಾಜ್ ತನ್ನ ಈ ಅನುಭವವನ್ನು ಫೇಸ್ ಬುಕ್ ಮೂಲಕ ಹಂಚಿಕೊಂಡಾಗಲೇ ಬೀಡಿ ಕಾರ್ಮಿಕ ಮಾಡಿದ ಶ್ರೇಷ್ಟ ದಾನದ ಬಗ್ಗೆ ಹೊರ ಜಗತ್ತು ಅರಿಯುವಂತಾದದ್ದು. ನಂತರ ಇಂದಿನ ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ ಕೂಡ ಬೀಡಿ ಕಾರ್ಮಿಕನ ದಾನದ ಬಗ್ಗೆ ಉಲ್ಲೇಖಿಸಿದ್ದಾರೆ.
"ನಿನ್ನೆ ಆ ವ್ಯಕ್ತಿ ಪಾಸ್ ಬುಕ್ಕಿನೊಂದಿಗೆ ಬ್ಯಾಂಕಿಗೆ ಬಂದು ಬ್ಯಾಂಕ್ ಮ್ಯಾನೇಜರ್ ಅವರಲ್ಲಿ ತನ್ನ ಖಾತೆಯಲ್ಲಿ ಒಟ್ಟು ಉಳಿತಾಯ ಎಷ್ಟಿದೆ ಎಂದು ಕೇಳಿದ್ದರು. ರೂ 200850 ಎಂದಾಗ ರೂ 850 ಬಿಟ್ಟು ಉಳಿದೆಲ್ಲಾ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾವಣೆ ಮಾಡಿ ಎಂದು ಕೇಳಿಕೊಂಡರು. ದಿಗಿಲುಗೊಂಡ ಬ್ಯಾಂಕ್ ಮ್ಯಾನೇಜರ್ ಆ ವ್ಯಕ್ತಿಯನ್ನು ನನ್ನ ಹತ್ತಿರ ಕಳುಹಿಸಿ ಕೊಟ್ಟರು. ಈಗ ರೂಪಾಯಿ ಒಂದು ಲಕ್ಷ ವರ್ಗಾವಣೆ ಮಾಡುತ್ತೇನೆ ಇನ್ನೊಂದು ಲಕ್ಷ ರೂಪಾಯಿಗಳನ್ನು ಸ್ವಲ್ಪ ಆಲೋಚಿಸಿದ ನಂತರ ವರ್ಗಾವಣೆ ಮಾಡಬಹುದು ಎಂದು ಅವರಿಗೆ ನಾನು ಸಲಹೆ ನೀಡಿದೆ. ಆದರೆ ಆ ವ್ಯಕ್ತಿ ಪೂರ್ತಿ ಎರಡು ಲಕ್ಷ ರುಪಾಯಿಗಳನ್ನು ವರ್ಗಾವಣೆ ಮಾಡಬೇಕಾಗಿದೆ ಎಂದು ಹಠ ಹಿಡಿದರು. ನಾನು ಅವರು ಹೇಳಿದಂತೆಯೇ ಪರಿಹಾರ ನಿಧಿಗೆ ಅವರ ಖಾತೆಯಿಂದ ಹಣ ವರ್ಗಾಯಿಸಿದೆ" ಎಂದು ಸೌಂದರ್ ರಾಜ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
"ಮುಂದೆ ನಿಮಗೆ ಹಣದ ಅಗತ್ಯತೆ ಬಂದರೆ ಏನು ಮಾಡುತ್ತೀರಿ?" ಎಂಬ ಬ್ಯಾಂಕ್ ನೌಕರರ ಪ್ರಶ್ನೆಗೆ ಆ ವ್ಯಕ್ತಿ "ನನಗೆ ಇದೀಗ ಜೀವನ ಸಾಗಿಸಲು ಹೆಚ್ಚಿನ ಸಮಸ್ಯೆಗಳಿಲ್ಲ. ಅಂಗವಿಕಲರಿಗಾಗಿ ಕೇರಳ ಸರಕಾರ ನೀಡುವ ಪಿಂಚಣಿ ತಪ್ಪದೆ ದೊರೆಯಿತ್ತಿದೆ. ಅದಲ್ಲದೆ ಬೀಡಿ ಸುತ್ತಿವಿಕೆಯಿಂದಾಗಿ ವಾರಕ್ಕೆ ಒಂದು ಸಾವಿರಕ್ಕಿಂತಲೂ ಹೆಚ್ಚು ಆದಾಯವನ್ನು ಗಳಿಸುತ್ತೇನೆ. ನಿನ್ನೆ ಮುಖ್ಯಮಂತ್ರಿಯವರು ಉಚಿತ ಲಸಿಕೆ ಯೋಜನೆಗೆ ಸಹಕರಿಸಬೇಕು ಎಂದು ಪತ್ರಿಕಾಗೋಷ್ಟಿಯಲ್ಲಿ ಕೇಳಿಕೊಂಡಾಗ ಆಳವಾಗಿ ಆಲೋಚಿಸಿ ದಾನ ಮಾಡುವ ನಿರ್ಧಾರಕ್ಕೆ ಬಂದೆ. ದಯಮಾಡಿ ನನ್ನ ಹೆಸರನ್ನು ಬಹಿರಂಗಗೊಳಿಸಬೇಡಿ” ಎಂದು ಉತ್ತರ ನೀಡಿದ್ದರು.
ಕೇಂದ್ರ ಸರಕಾರದ ದುಬಾರಿ ಲಸಿಕೆ ನೀತಿಯನ್ನು ವಿರೋಧಿಸಿ ಕೇರಳದಲ್ಲಿ ಕೆಲ ಯುವಕರು ವ್ಯಾಕ್ಸಿನ್ ಚಾಲೆಂಜಿಗೆ ಚಾಲನೆ ಕೊಟ್ಟಿದ್ದರು. ಜೊತೆಗೆ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ರಾಜ್ಯದ ಜನತೆಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಘೋಷಿಸುತ್ತಿದ್ದಂತೆಯೇ ಸರಕಾರದ ಆರ್ಥಿಕ ಹೊಣೆಯನ್ನು ಕಡಿಮೆ ಮಾಡಲೆಂದು ಜನರು ಪರಿಹಾರ ನಿಧಿಗೆ ಹಣ ವರ್ಗಾವಣೆ ಮಾಡಲು ಆರಂಭಿಸಿದ್ದರು. ಇದೀಗ ಅಧಿಕೃತವಾಗಿ ಯಾವುದೇ ಮನವಿಯಿಲ್ಲದಿದ್ದರೂ ವ್ಯಾಕ್ಸಿನ್ ಚಾಲೆಂಜಿನಿಂದಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗಳಿಗೆ ಕೇರಳಿಗರು ಮನಸೋಇಚ್ಛೆ ದಾನ ಮಾಡುತ್ತಿದ್ದಾರೆ. ಬಡ ಮಹಿಳೆಯೊಬ್ಬಳು ತನ್ನ ಜೀವನೋಪಯಕ್ಕಿದ್ದ ಏಕೈಕ ಆಡೊಂದನ್ನು ಮಾರಿ ರು.5000 ದಾನ ಮಾಡಿದ್ದೂ ವಿಶೇಷ ಸುದ್ಧಿಯಾಗಿದೆ. ಸಾವಿರಾರು ವಿದ್ಯಾರ್ಥಿಗಳು ತಮ್ಮ ಉಳಿಕೆಯ ಹುಂಡಿಗಳನ್ನು ಒಡೆದು ಅದರಲ್ಲಿನ ಹಣವನ್ನು ಪರಿಹಾರ ನಿಧಿಗೆ ನೀಡಲು ಮುಂದೆ ಬಂದಿದ್ದಾರೆ.