ನವದೆಹಲಿ, ಎ.24 (DaijiworldNews/PY): ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ವೈದ್ಯಕೀಯ ಉಪಕರಣ, ಆಕ್ಸಿಜನ್ ಸರಬರಾಜು, ಲಸಿಕೆ ಆಮದಿನ ಮೇಲಿನ ಸೀಮಾ ಸುಂಕ ಕಡಿತಗೊಳಿಸುವಂತೆ ಆದೇಶ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಆಕ್ಸಿಜನ್ ಹಾಗೂ ಅದಕ್ಕೆ ಸಂಬಂಧಿಸಿದಂತ ಉಪಕರಣಗಳು, ಔಷಧಗಳ ಮೇಲೆ ವಿಧಿಸಲಾಗಿರುವ ಸೀಮಾ ಸುಂಕ ಹಾಗೂ ಆರೋಗ್ಯ ಸೆಸ್ ಅನ್ನು ಮೂರು ತಿಂಗಳ ಕಾಲ ರದ್ದು ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
"ಆಕ್ಸಿಜನ್ ಸರಬರಾಜು, ವ್ಯಾಕ್ಸಿನ್ ಆಮದಿನ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿರುವ ಕಾರಣ ಈ ವೈದ್ಯಕೀಯ ಉಪಕರಣಗಳು ಈಗ ಅಗ್ಗವಾಗಲಿದೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ದೊರಕಲಿದೆ. ಈ ರೀತಿಯ ಉಪಕರಣಗಳ ಪೂರೈಕೆ ಯಾವುದೇ ರೀತಿಯಾದ ಅಡೆತಡೆ ಇಲ್ಲದೇ ಸಾಗಾಟವಾಗುವಂತೆ ಗಮನಹರಿಸಬೇಕು" ಎಂದು ಪ್ರಧಾನಿ ಇಲಾಖೆಗಳಿಗೆ ತಿಳಿಸಿದ್ದಾರೆ.
"ಆಸ್ಪತ್ರೆಗಳಿಗೆ ತಕ್ಷಣಕ್ಕೆ ಆಕ್ಸಿಜನ್ ಸರಬರಾಜು, ಮನೆಗಳಲ್ಲಿನ ಚಿಕಿತ್ಸೆ, ವ್ಯಾಕ್ಸಿನ್ ಆಮದು ಹಾಗೂ ವೈದ್ಯಕೀಯ ಉಪಕರಣಗಳ ಅಗತ್ಯ ಹೆಚ್ಚಿದ್ದು, ಈ ಕ್ರಮವನ್ನು ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.