ನವದೆಹಲಿ, ಏ.24 (DaijiworldNews/HR): ದೇಶದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಕೊರೊನಾದ ತೀವ್ರತೆ ಹೆಚ್ಚಾಗಿದ್ದು, ಈ ಸೋಂಕು ಹಳ್ಳಿಗಳಿಗೆ ವ್ಯಾಪಿಸದಂತೆ ಎಲ್ಲ ರೀತಿಯಿಂದಲೂ ತಡೆಯುವ ಪ್ರಯತ್ನವಾಗಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಪಂಚಾಯತ್ ರಾಜ್ ದಿವಸ್ ಅಂಗವಾಗಿ ಶನಿವಾರ ವರ್ಚುವಲ್ ಆಗಿ ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, "ಕಳೆದ ವರ್ಷ ಹಳ್ಳಿಗಳಿಗೆ ಕೊರೊನಾ ಸೋಂಕು ಹರಡದಂತೆ ಯಶಸ್ವಿಯಾಗಿ ತಡೆಯಲಾಗಿದ್ದು, ಈ ಬಾರಿ ಹಳ್ಳಿಗಳಲ್ಲಿರುವ ಸ್ಥಳೀಯ ನಾಯಕರು ಹಿಂದಿನ ವರ್ಷದ ಅನುಭವ ಮತ್ತು ಜ್ಞಾನ ಬಳಸಿಕೊಂಡು ಅದೇ ಪ್ರಯತ್ನವನ್ನು ಪುನರಾರ್ತಿಸುವ ವಿಶ್ವಾಸ ಇದೆ" ಎಂದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಮೊದಲ ಜಯ ಸಾಧಿಸುವವರು ಯಾರಾದರೂ ಇದ್ದರೆ, ಅದು ಗ್ರಾಮೀಣ ಭಾರತದ ಜನರು ಮಾತ್ರ. ನನಗೆ ಹಳ್ಳಿಗಳಲ್ಲಿರುವ ನಾಯಕತ್ವದ ಬಗ್ಗೆ ಅಷ್ಟು ವಿಶ್ವಾಸವಿದೆ" ಎಂದಿದ್ದಾರೆ.
ಇನ್ನು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮೀಣ ಪ್ರದೇಶದ ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು. ಜತೆಗೆ, ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು" ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಭಾಗವಹಿಸಿದ್ದು, ದೇಶದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು.