ಬೆಂಗಳೂರು, ಎ.24 (DaijiworldNews/PY): ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಸೋಂಕಿತರ ಚಿಕಿತ್ಸೆಗಾಗಿ ನಿತ್ಯ 1,471 ಟನ್ ಆಕ್ಸಿಜನ್ ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದಾರೆ.
ಈ ಸಂದರ್ಭ, "ರಾಜ್ಯಕ್ಕೆ ಮುಂದಿನ 10 ದಿನಗಳಲ್ಲಿ ಎರಡು ಲಕ್ಷ ಡೋಸ್ಗಳಷ್ಟು ರೆಮ್ಡೆಸಿವಿರ್ ಔಷಧವನ್ನು ನೀಡಬೇಕು" ಎಂದು ಕೋರಿದ್ದಾರೆ.
"ರಾಜ್ಯದಲ್ಲಿ ಗುರುವಾರ ಒಂದೇ ದಿನ 500 ಟನ್ ಆಕ್ಸಿಜನ್ ಬಳಕೆಯಾಗಿದೆ. ರಾಜ್ಯಕ್ಕೆ ಕೇಂದ್ರವು 300 ಟನ್ ಆಕ್ಸಿಜನ್ ಮಾತ್ರವೇ ಹಂಚಿಕೆ ಮಾಡಿದೆ. ಇದೇ ರೀತಿಯಾದ ಪರಿಸ್ಥಿತಿ ಮುಂದುವರೆದಲ್ಲಿ ಹಲವಾರು ಆರೋಗ್ಯ ಸೇವಾ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಬಹುದು" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ ಆಕ್ಸಿಜನ್ ಬಳಕೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ರಾಜ್ಯಕ್ಕೆ ಎಪ್ರಿಲ್ 25ರಿಂದ 1,142 ಟನ್ ಆಕ್ಸಿಜನ್ನ ಅವಶ್ಯಕತೆ ಇದೆ. ಎ.30ರ ಬಳಿಕ 1471 ಟನ್ ಆಕ್ಸಿಜನ್ನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೂಡಲೇ 1,471 ಟನ್ ಆಕ್ಸಿಜನ್ ಅನ್ನು ಹಂಚಿಕೆ ಮಾಡಿ" ಎಂದು ಮನವಿ ಮಾಡಿದ್ದಾರೆ.