ಮುಂಬೈ, ಎ.24 (DaijiworldNews/PY): ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಹಾಗೂ ಇತರರ ವಿರುದ್ದ ಶನಿವಾರ ಸಿಬಿಐ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಯೋರ್ವ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಮುಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಅನಿಲ್ ದೇಶ್ಮುಖ್ ಅವರು ಪ್ರತೀ ತಿಂಗಳು 100 ಕೋಟಿ. ರೂ. ಲಂಚ ಸಂಗ್ರಹ ಮಾಡುವಂತೆ ಸೂಚನೆ ನೀಡಿದ್ದರು ಎಂದು ಐಪಿಎಸ್ ಅಧಿಕಾರಿ ಪರಮ್ ವೀರ್ ಸಿಂಗ್ ಆರೋಪಿಸಿದ್ದರು.
ಮುಂಬೈನ ಬಾರ್ ಹಾಗೂ ರೆಸ್ಟೋರೆಂಟ್ಗಳಿಂದ ತಿಂಗಳಿಗೆ 100 ಕೋಟಿ. ರೂ. ಅನ್ನು ಸಂಗ್ರಹಿಸುವಂತೆ ಅನಿಲ್ ದೇಶ್ಮುಖ್ ಅವರು ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಪರಮ್ಬೀರ್ ಸಿಂಗ್ ಅವರು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಅವರಿಗೆ ಬರೆದಿದ್ದ ಪತ್ರದಲ್ಲಿ ಆರೋಪಿಸಿದ್ದರು. ಇದಾದ ಬಳಿಕ ಎಪ್ರಿಲ್ 14ರಂದು ಮಾಜಿ ಸಚಿವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ದೇಶ್ಮುಖ್ ಅವರ ವಿರುದ್ದ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಪರಮ್ ವೀರ್ ಸಿಂಗ್ ಬಾಂಬೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಪ್ರಾಥಮಿಕ ವಿಚಾರಣೆಯ ಭಾಗವಾಗಿ ಸಿಬಿಐ, ಅನಿಲ್ ದೇಶ್ಮುಖ್ ಅವರ ವೈಯುಕ್ತಿಕ ಸಹಾಯಕರಾದ ಸಂಜೀವ್ ಪಾಲಂಡೆ ಹಾಗೂ ಕುಂದನ್ ಶಿಂಧೆ ಸೇರಿದಂತೆ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಇಬ್ಬರು ಚಾಲಕರು, ಬಾರ್ ಮಾಲೀಕರು ಮುಂಬೈ ಪೊಲೀಸ್ ಅಧಿಕಾರಿಗಳು ಹಾಗೂ ಮಾಜಿ ಸಚಿವರಿಗೆ ಹತ್ತಿರವಿರುವ ಜನರನ್ನು ವಿಚಾರಣೆಗೆ ಒಳಪಡಿಸಿತ್ತು.