ನವದೆಹಲಿ, ಎ.24 (DaijiworldNews/PY): "ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಈಗ ಕೈಗೊಳ್ಳುತ್ತಿರುವ ಕ್ರಮಗಳನ್ನು ಈ ಮೊದಲೇ ಏಕೆ ತೆಗೆದುಕೊಳ್ಳಲಿಲ್ಲ?. ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ ನೀಡಬೇಕು" ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "2020ರ ಎಪ್ರಿಲ್ನಲ್ಲಿ ಹಾಗೂ 2020ರ ಅಕ್ಟೋಬರ್-ನವೆಂಬರ್ನಲ್ಲೇ ಸಂಸದೀಯ ಸಮಿತಿಯಿಂದ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ ಸರ್ಕಾರ ಈಗ ತೆಗೆದುಕೊಳ್ಳುತ್ತಿರುವ ಕ್ರಮವನ್ನು ಈ ಮೊದಲೇ ಏಕೆ ಕೈಗೊಂಡಿಲ್ಲ?. ಇದು ನಿರ್ಲಕ್ಷ್ಯವಲ್ಲವೇ?. ಇದಕ್ಕೆ ಯಾರೂ ಕೂಡಾ ಜವಾಬ್ದಾರರಲ್ಲವೇ?. ಆರೋಗ್ಯ ಸಚಿವ ಹಾಗೂ ಆರೋಗ್ಯ ಕಾರ್ಯದರ್ಶಿ ರಾಜೀನಾಮ ನೀಡುವಂತೆ ಏಕೆ ಕೇಳಬಾರದು?" ಎಂದು ಪ್ರಶ್ನಿಸಿದ್ದಾರೆ.
"ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ಜನರು ಅಳುತ್ತಿದ್ದಾರೆ. ಸೋಂಕಿತರನ್ನು ಪರೀಕ್ಷೆ ಮಾಡುವಂತೆ ವೈದ್ಯರಲ್ಲಿ ಬೇಡುತ್ತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಕರೆತರುವ ಸಂದರ್ಭ ಆಮ್ಲಜನಕದ ಸಿಲಿಂಡರ್ಗಳನ್ನು ಬೆನ್ನಮೇಲೆ ಹೊತ್ತುಕೊಂಡು ಬರುತ್ತಿದ್ದಾರೆ. ಆಮ್ಲಜನಕ ಪೂರೈಕೆ ಮಾಡುವಂತೆ ಆಸ್ಪತ್ರೆಗಳು ಹೈಕೋರ್ಟ್ನ ಮೊರೆಗೋಗುತ್ತಿವೆ" ಎಂದಿದ್ದಾರೆ.
"ಆರೋಗ್ಯ ಸಚಿವರೂ ಸೇರಿ ಯಾರಿಗಾದರೂ ಮನಃಸಾಕ್ಷಿ ಇದ್ದಲ್ಲಿ ಅವರು ಕೂಡಲೇ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.