ತ್ರಿಶೂರ್, ಎ.24 (DaijiworldNews/PY): ತ್ರಿಶೂರ್ ಪೂರಂನ ಪ್ರಯುಕ್ತ ಮದತಿಲ್ ಮೆರವಣಿಗೆಯಲ್ಲಿ ಭಕ್ತರು ಹಾಗೂ ತಾಳವಾದ್ಯ ಕಲಾವಿದರು ಸಾಗುತ್ತಿದ್ದ ಸಂದರ್ಭ ಭಾರೀ ಆಲದ ಮರವೊಂದರ ಕೊಂಬೆ ಮುರಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ತಿರುವಂಬಡಿ ದೇವಾಲಯ ಪೂರಂನ ಸಂಘಟನಾ ಸಮಿತಿ ಸದಸ್ಯರಾದ ರಮೇಶ್ ಹಾಗೂ ರಾಧಾಕೃಷ್ಣನ್ ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಏಳು ಮಂದಿಯನ್ನು ತ್ರಿಶೂರು ವೈದ್ಯಕೀಯ ಆಸ್ಪತ್ರೆಗೆ ಹಾಗೂ ಉಳಿದ 28 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
"ಘಟನೆಯ ಹಿನ್ನೆಲೆ ಇಂದು ನಡೆಯಬೇಕಿದ್ದ ಭವ್ಯ ಪಟಾಕಿ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಪ್ರದರ್ಶನಕ್ಕೆಂದು ಇಟ್ಟಿದ್ದ ಪಟಾಕಿಗಳನ್ನು ಇಂದು ಬೆಳಗ್ಗಿನ ಜಾವ ನಾಶಪಡಿಸಲಾಯಿತು. ಸಾಂಪ್ರದಾಯಿಕವಾಗಿ ಒಂದು ಆನೆಯ ಪಕಲಮೂರಮ್ ಮೆರವಣಿಗೆ ನಡೆಸಲಾಗುತ್ತದೆ" ಎಂದು ದೇವಸ್ಥಾನದ ಮಂಡಲೀ ಹೇಳಿದೆ.
ಘಟನಾ ಸ್ಥಳದಿಂದ 40ಕ್ಕೂ ಅಧಿಕ ಮಂದಿಯನ್ನು ಪೊಲೀಸರು, ಭಕ್ತರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ನೆರವಿನಿಂದ ರಕ್ಷಿಸಲಾಯಿತು.