ತಿರುವನಂತಪುರಂ, ಏ.23 (DaijiworldNews/SB): ಕೇಂದ್ರ ಸರಕಾರದ ಲಸಿಕೆ ನೀತಿಯನ್ನು ವಿರೋಧಿಸಿ ಎರಡು ದಿನಗಳ ಹಿಂದೆ ಆರಂಭವಾದ ವಾಕ್ಸಿನ್ ಚಾಲೆಂಜ್ ಇದೀಗ ಕೇರಳದಾದ್ಯಂತ ವಿಶೇಷ ಸ್ವೀಕೃತಿಯನ್ನು ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಎರಡು ದಿನಗಳ ಹಿಂದೆ ಘೋಷಿಸಿದ್ದರು. ತಕ್ಷಣ ಲಸಿಕೆ ಹಾಕಿಸಿಕೊಂಡ ವೆಕ್ತಿಯೋರ್ವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ರು 800 ನಿಕ್ಷೇಪಿಸಿ ತನ್ನ ಹೆಸರಲ್ಲಿ ಮತ್ತಿಬ್ಬರಿಗೆ ವಾಕ್ಸಿನ್ ಎಂದು ಟ್ವೀಟ್ ಮಾಡಿದ್ದರು. ವಾಕ್ಸಿನ್ ಚಾಲೆಂಜ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಆರಂಭವಾದ ಈ ಪ್ರತಿಭಟನೆ ಎರಡು ದಿನಗಳಲ್ಲಿ ಒಂದು ಕೋಟಿಗಿಂತಲೂ ಹೆಚ್ಚಿನ ದೇಣಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಲ್ಲಿ ಜಮಾವಣೆಯಾಗುವಂತೆ ಮಾಡಿದೆ. ಪ್ರತಿ ನಿಮಿಷಕ್ಕೂ ಕೇರಳದ ವ್ಯಾಪರಿಗಳು, ಸರಕಾರಿ ಹಾಗೂ ಖಾಸಾಗಿ ಉಧ್ಯೋಗಿಗಳು ಸಾವಿರಾರು ರುಪಾಯಿಗಳನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುತ್ತಿದ್ದಾರೆ.
ಕೇಂದ್ರ ಸರಕಾರದ ದರ ಪಾವತಿಸಿ ಲಸಿಕೆ ಪಡೆದುಕೊಳ್ಳಬೇಕು ಎಂಬ ನೀತಿಯ ವಿರುದ್ಧ ಚಳುವಳಿಯೆಂಬಂತೆ ಕೇರಳೀಯರು ಆರಂಭಿಸಿದ ವಾಕ್ಸಿನ್ ಚಾಲೆಂಜ್ ಇದೀಗ ರಾಜ್ಯ ಸರ್ಕಾರಕ್ಕೆ ವಿಶೇಷ ಸಹಕಾರಿಯಾಗಿ ತಿರುವುಪಡೆದುಕೊಂಡಿದೆ. ಬೃಹತ್ತ್ ಮೊತ್ತದ ಆರ್ಥಿಕ ಹೊರೆ ಬಿದ್ದರೂ ಅದನ್ನು ಲೆಕ್ಕಿಸದೆ ರಾಜ್ಯ ಸರಕಾರವು ಜನತೆಯ ಮೇಲಿನ ವಿಶೇಷ ಕಾಳಜಿಯಿಂದ ಉಚಿತ ಲಸಿಕೆ ನೀಡಲು ಮುಂದಾಗುತ್ತಿದ್ದಂತೆ ಅನೀರೀಕ್ಷಿತವಾಗಿ ದಾನಿಗಳಿಂದ ಸಹಾಯ ಹರಿದು ಬರುತ್ತಿರುವುದು ಎಲ್ಲರನ್ನೂ ಬೆರಗುಗೊಳಿಸಿದೆ.
ಯಾವುದೇ ಅಪೇಕ್ಷೆಯಿಲ್ಲದೆ ಅನೀರೀಕ್ಷಿತವಾಗಿ ಕೇರಳಿಗರು ಲಸಿಕೆಗಾಗಿ ಆರ್ಥಿಕ ನೆರವು ನೀಡುತ್ತಿರುವ ಪರಿಯನ್ನು ಇಂದಿನ ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೇರಳೀಯನಾಗಿ ಜನ್ಮ ತಾಳಿದಕ್ಕೆ ಅಭಿಮಾನಪಡುತ್ತೇನೆ ಎಂದು ಹೇಳಿದ ಅವರು, ಜನತೆಯ ಈ ಮನೋಸ್ಥಿತಿ ಕೇರಳವನ್ನು ಇತರ ರಾಜ್ಯಗಳಿಗಿಂತ ವಿಭಿನ್ನವಾಗಿ, ಆದರ್ಶದಾಯಕವಾಗಿ ನೋಡುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.