ಬೆಂಗಳೂರು, ಎ.23 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರೇ, ಪರದೆಯಲ್ಲಿ ಮತ್ತೆಮತ್ತೆ ಮುಖತೋರಿಸಿದರೆ ಕೊರೊನಾ ವೈರಸ್ ಓಡಿಹೋಗುವುದಿಲ್ಲ, ಆಗಾಗ ಮುಖ್ಯಮಂತ್ರಿಗಳಿಗೆ ಪಾಠಮಾಡಲು ನೀವು ಹೆಡ್ಮಾಸ್ಟರ್ ಕೂಡಾ ಅಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ವಿಡಿಯೋ ಸಂವಾದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಪ್ರಧಾನಿ ನರೇಂದ್ರ ಮೋದಿ ಅವರೇ, ಪರದೆಯಲ್ಲಿ ಮತ್ತೆಮತ್ತೆ ಮುಖತೋರಿಸಿದರೆ ಕೊರೊನಾ ವೈರಸ್ ಓಡಿಹೋಗುವುದಿಲ್ಲ, ಆಗಾಗ ಮುಖ್ಯಮಂತ್ರಿಗಳಿಗೆ ಪಾಠಮಾಡಲು ನೀವು ಹೆಡ್ಮಾಸ್ಟರ್ ಕೂಡಾ ಅಲ್ಲ. ಮೊದಲು ರಾಜ್ಯಗಳ ಬೇಡಿಕೆಗಳನ್ನು ಈಡೇರಿಸಿ ಕೊರೊನಾ ಸೋಂಕು ನಿಯಂತ್ರಿಸಿ" ಎಂದು ಒತ್ತಾಯಿಸಿದ್ದಾರೆ.
"ಪ್ರತಿಯೊಂದು ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಆಮ್ಲಜನಕ ಪೂರೈಕೆ ಮಾಡಿ ಎಂದರೆ ಅಕ್ರಮ ದಾಸ್ತಾನು ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದುಕರೆ ನೀಡುತ್ತೀರಿ. ನೀವೇನು ರಾಜ್ಯಗಳ ಅನುಮತಿ ಪಡೆದು ಆಮ್ಲಜನಕ ರಪ್ತು ಮಾಡಿದ್ದೀರಾ ಪ್ರಧಾನಿ ಅವರೇ?" ಎಂದು ಪ್ರಶ್ನಿಸಿದ್ದಾರೆ.
"ಬೆಂಗಳೂರಿನ ಖಾಸಗಿ/ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಮೀಸಲಾದ ಹಾಸಿಗೆಗಳು 7621, ಭರ್ತಿಯಾಗಿರುವುದು 6123, ಲಭ್ಯ ಇರುವುದು 1487. ನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ 15ಸಾವಿರಕ್ಕೂ ಹೆಚ್ಚು. ಈ ವಾಸ್ತವವನ್ನು ಸಿಎಂ ಯಡಿಯೂರಪ್ಪ ಅವರು ನಿಮಗೇನಾದರೂ ತಿಳಿಸಿದ್ದಾರೆಯೇ ಪ್ರಧಾನಿಯವರೇ?" ಎಂದು ಕೇಳಿದ್ದಾರೆ.
"ಬೆಂಗಳೂರಿನಲ್ಲಿ ಶೇ 65ರಷ್ಟು ಸಾಮಾನ್ಯ ಹಾಸಿಗೆ, ಶೇ 96ರಷ್ಟು ಬಹು ಅವಲಂಬನೆಯ ಹಾಸಿಗೆ, ಶೇ 98ರಷ್ಟು ಐಸಿಯು ಹಾಸಿಗೆ ಮತ್ತು ಶೇ 97ರಷ್ಟು ವೆಂಟಿಲೇಟರ್ ಹಾಸಿಗೆ ಭರ್ತಿಯಾಗಿವೆ. ನಿತ್ಯ 15 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆ ಎದುರು ಕ್ಯೂ ನಿಲ್ಲುತ್ತಿದ್ದಾರೆ. ಅವರದ್ದೇನು ಗತಿ ಪ್ರಧಾನಿಯವರೇ?" ಎಂದು ಪ್ರಶ್ನಿಸಿದ್ದಾರೆ.
'ಪರಿಸ್ಥಿತಿ ಕೈಮೀರಿಹೋಗಿದೆ' ಎಂದು ಸಿಎಂ ಅವರು ಜನತೆಯ ಮುಂದೆ ಗೋಳಾಡುತ್ತಿರುವುದರಿಂದ ಪ್ರಶ್ನೆ ನಿಮ್ಮನ್ನೇ ಕೇಳಬೇಕಾಗಿದೆ ಪ್ರಧಾನಿಯವರೇ. ಕೈಲಾಗದ ಮುಖ್ಯಮಂತ್ರಿಯವರನ್ನು ಇಟ್ಟುಕೊಂಡು ಕೊರೊನಾ ನಿಯಂತ್ರಣ ಮಾಡುವುದಾದರೂ ಹೇಗೆ ಪ್ರಧಾನಿಗಳೇ? ಎಂದು ಕೇಳಿದ್ದಾರೆ.