ಬೆಂಗಳೂರು, ಎ.23 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದಿಂದ ಆಮ್ಲಜನಕ ಹಾಗೂ ರೆಮ್ಡಿಸಿವರ್ ಔಷಧ ಸರಬರಾಜು ಬೇಡಿಕೆ ಇಟ್ಟಿದ್ದು, ಇದಕ್ಕೆ ಸಕರಾತ್ಮಕವಾದ ಸ್ಪಂದನೆ ಸಿಕ್ಕಿದೆ" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮುಕ್ತಾಯಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೊರೊನಾ ಸ್ಥಿತಿಗತಿ, ನಿಯಂತ್ರಣದ ಬಗ್ಗೆ ಹತ್ತು ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಲೋಚನೆ ನಡೆಸಿದ್ದಾರೆ. ಕೊರೊನಾದ ಮೊದಲನೇ ಅಲೆಯಲ್ಲಿದ್ದ ವೈರಾಣುವಿನ ಸ್ವಭಾವಕ್ಕೂ ಈಗಿನ ರೂಪಾಂತರಿ ವೈರಾಣು ಬದಲಾಗಿದೆ. ಈ ಹಿನ್ನೆಲೆ ಮೂರುಪಟ್ಟು ವೇಗದ ಹರಡುವಿಕೆ ಕಂಡುಬಂದಿದೆ. ವಯೋಮಿತಿ ಕೂಡಾ ಬದಲಾಗಿದೆ" ಎಂದು ಹೇಳಿದ್ದಾರೆ.
"ರಾಜ್ಯದಿಂದ ಆಮ್ಲಜನಕ ಹಾಗೂ ರೆಮ್ಡಿಸಿವರ್ ಔಷಧ ಸರಬರಾಜು ಬೇಡಿಕೆ ಇಟ್ಟಿದ್ದು, ಇದಕ್ಕೆ ಸಕರಾತ್ಮಕವಾದ ಸ್ಪಂದನೆ ಸಿಕ್ಕಿದೆ. ಅಲ್ಲದೇ, ನಮ್ಮ ಹೋಂ ಐಸೋಲೇಷನ್ ವ್ಯವಸ್ಥೆ ಸದೃಢಗೊಳಿಸುವಂತೆ ಪ್ರಧಾನಿಗಳು ರಾಜ್ಯಕ್ಕೆ ಸಲಹೆ ನೀಡಿದ್ದಾರೆ" ಎಂದಿದ್ದಾರೆ.
"ಈ ವೈರಾಣುವಿನ ವಿರುದ್ದ ಗೆಲ್ಲಲು ಹೋಂ ಐಸೋಲೇಷನ್ನ ಸದೃಢವಾಗಬೇಕು. ಎಲ್ಲರೂ ಆಸ್ಪತ್ರೆಗೆ ಧಾವಿಸುತ್ತಿರುವ ಕಾರಣ ವೈದ್ಯಕೀಯ ಸಿಬ್ಬಂದಿಗಳಿಗೆ ಕಷ್ಟವಾಗಿದೆ. ಶೇ. 90ರಷ್ಟು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ. ಹಾಗಾಗಿ ನಿಮ್ಮ ಹೋಂ ಐಸೋಲೇಷನ್ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ಟೆಲಿಕಾಲಿಂಗ್ ಮುಖೇನ ಉಪಚಾರ, ಚಿಕಿತ್ಸೆ ನೀಡಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
"ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಪರವಾಗಿ ಎರಡು ಬೇಡಿಕೆಗಳನ್ನು ಇಟ್ಟಿದ್ದಾರೆ. ಎಪ್ರಿಲ್ ತಿಂಗಳ ಕೊನೆಯವರೆಗೂ ಸಾವಿರ ಟನ್ ಆಮ್ಲಜನಕ ಹಾಗೂ ಮೇ 1ರಿಂದ 500 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಎರಡನೆಯದಾಗಿ ಕೂಡಲೇ 2 ಲಕ್ಷ ರೆಮ್ಡಿಸಿವರ್ ಔಷಧಿಯನ್ನು ಕಳುಹಿಸಿಕೊಡಲು ಬೇಡಿಕೆ ಇಟ್ಟಿದ್ದಾರೆ" ಎಂದು ತಿಳಿಸಿದ್ದಾರೆ.
"ಕೊರೊನಾ ನಿಯಂತ್ರಣಕ್ಕಾಗಿ ನಾವು ಕೈಗೊಂಡಿರುವ ಕ್ರಮಗಳು ಹಾಗೂ ನಮ್ಮ ಬೇಡಿಕೆಗಳ ಬಗ್ಗೆ ಸಿಎಂ ಅವರು ಪ್ರಧಾನಿಗೆ ವಿವರವಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ನಾಲ್ಕೈದು ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ" ಎಂದಿದ್ದಾರೆ.
"ಕೊರೊನಾದ ಎರಡನೇ ಅಲೆ ಹೆಚ್ಚುತ್ತಿದೆ. ಜನರು ಭಯ ಪಡಬೇಡಿ. ಸೋಂಕು ಕಾಣಿಸಿಕೊಂಡಲ್ಲಿ ಮನೆಯಲ್ಲೇ ಪ್ರತ್ಯೇಕಗೊಳ್ಳಿ. ಮನೆಯಲ್ಲಿ ಉತ್ತಮವಾದ ಆಹಾರ, ತರಕಾರಿ-ಹಣ್ಣು ಸೇವನೆ ಮಾಡಿ, ಪ್ರಾಣಾಯಾಮ ಮಾಡಿ. ಒಂದು ವೇಳೆ ಆಮ್ಲಜನಕದ ಪ್ರಮಾಣ ಶೇ.90ಕ್ಕಿಂತ ಕಡಿಮೆಯಾದಲ್ಲಿ ಕೂಡಲೇ ಸಹಾಯವಾಣಿಗೆ ಕರೆ ಮಾಡಿ, ಅವರು ನಿಮ್ಮನ್ನು ಎಲ್ಲಿ ದಾಖಲಿಸಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತಾರೆ" ಎಂದು ತಿಳಿಸಿದ್ದಾರೆ.
"ನಾವೆಲ್ಲರೂ ಕಡ್ಡಾಯವಾಗಿ ಮಾರ್ಗಸೂಚಿ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಿಎಂ ಅವರು ಈಗಾಗಲೇ ಸುಮಾರು ಒಂದು ಕೋಟಿ ಕೊರೊನಾ ಡೋಸ್ ಖರೀದಿಗೆ ಅನುಮತಿ ನೀಡಿದ್ದಾರೆ. ನಾವು ಕೊರೊನಾದ ಮೂರನೇ ಅಲೆಯನ್ನು ನಿಯಂತ್ರಿಸಲು ಸಫಲರಾಗಲಿದ್ದೇವೆ" ಎಂದಿದ್ದಾರೆ.