ನವದೆಹಲಿ, ಎ.23 (DaijiworldNews/PY): ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣ ಸೇರಿದಂತೆ ಆಕ್ಸಿಜನ್ ಹಾಗೂ ಐಸಿಯು ಹಾಸಿಗೆಗಳ ಕೊರತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ಸೋಂಕಿನ ಕಾರಣದಿಂದ ಮಾನವನ ದೇಹದಲ್ಲಿ ಆಕ್ಸಿಜನ್ನ ಕೊರೆತೆಯಾಗಬಹುದು. ಆದರೆ, ಇದು ಆಕ್ಸಿಜನ್ ಹಾಗೂ ಐಸಿಯು ಹಾಸಿಗೆಗಳ ಕೊರತೆಯಿಂದ ಆಗಿದೆ. ಇದಕ್ಕೆ ಸರ್ಕಾರವೇ ಹೊಣೆ. ಈ ಕಾರಣದಿಂದ ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,32,730 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,62,63,695ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 2,263 ಮಂದಿ ಸಾವನ್ನಪ್ಪಿದ್ದು, ಒಟ್ಟು 1,86,920ಕ್ಕೆ ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.