ಮುಂಬೈ, ಎ.23 (DaijiworldNews/PY): "ನಾನಿನ್ನೂ ಸತ್ತಿಲ್ಲ ಬದುಕಿದ್ದೇನೆ. ನನ್ನ ಸಾವಿನ ಬಗ್ಗೆ ವದಂತಿ ಹರಡಬೇಡಿ" ಎಂದು ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸ್ಪಷ್ಟನೆ ನೀಡಿದ್ದಾರೆ.
"ತಪ್ಪಿನ ಅರಿವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ತಮ್ಮ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಅನ್ನು ಅಳಿಸಿದ್ದರು. ಈ ವಿಚಾರವಾಗಿ ನಾನು ಏನು ಮಾಡಲಿ. ಕೆಲವರು ಸಾವಿನ ಸುದ್ದಿ ಬಗ್ಗೆ ಖಾತರಿಪಡಿಸಿಕೊಳ್ಳದೇ ವರದಿ ಮಾಡುತ್ತಾರೆ. ಇಂದೂರ್ ಜಿಲ್ಲಾಡಳಿತದವರನ್ನು ಸಂಪರ್ಕಿಸಿ ನಾನು ಬದುಕಿದ್ದೇನೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು" ಎಂದು ತಿಳಿಸಿದ್ದಾರೆ.
ಶಶಿ ತರೂರ್ ಅವರು ಗುರುವಾರ ರಾತಿ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಜನ್ ಅವರು ಮೃತಪಟ್ಟಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಈ ಟ್ವೀಟ್ ಅನ್ನು ಗಮನಿಸಿದ್ದ ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀ ಅವರು, "ಮಹಾಜನ್ ಅವರು ಆರೋಗ್ಯವಾಗಿದ್ದಾರೆ" ಎಂದು ಟ್ವೀಟ್ ಮಾಡಿದ್ದರು. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಶಶಿ ತರೂರ್ ಅವರು ಟ್ವೀಟ್ ಅನ್ನು ಅಳಿಸಿ ಹಾಕಿದ್ದರು.