ಮುಂಬೈ, ಏ.23 (DaijiworldNews/HR): ರೈಲ್ವೆ ಫ್ಲಾಟ್ಫಾರ್ಮ್ನಲ್ಲಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಹಳಿ ಮೇಲೆ ಬಿದ್ದ ಮಗುವೊಂದನ್ನು ರೈಲು ಬಂದೇ ಬಿಟ್ಟಿತು ಅನ್ನುವಷ್ಟರಲ್ಲಿ ರೈಲ್ವೆ ಸಿಬ್ಬಂದಿ ಮಯೂರ್ ಶೆಲ್ಖೆ ಎಂಬವರು ಮಗುವಿನ ಜೀವ ಉಳಿಸಿದ ಘಟನೆಯು ಮುಂಬೈ ವಿಭಾಗದ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿದ್ದು, ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮಯೂರ್ ಗೆ 50,000 ರೂ. ಬಹುಮಾನ ಘೋಷಿಸಿದರು. ವಿಶೇಷವೆಂದರೆ ತನಗೆ ಬಂದ ಬಹುಮಾನದ ಅರ್ಧ ಭಾಗದ ಹಣವನ್ನು ಆ ಮಗುವಿನ ಶಿಕ್ಷಣಕ್ಕಾಗಿ ಖರ್ಚು ಮಾಡುವುದಾಗಿ ಮಯೂರ್ ಹೇಳಿದ್ದಾರೆ.
ಥಾಣೆ ಜಿಲ್ಲೆ ವಂಗಾನಿಯಲ್ಲಿ ದೃಷ್ಟಿದೋಷ ಹೊಂದಿದ ತಾಯಿಯೊಂದಿಗೆ ತೆರಳುತ್ತಿದ್ದ ಪುಟ್ಟಮಗು ರೈಲ್ವೆ ಪ್ಲಾಟ್ ಫಾರ್ಮ್ನಿಂದ ಟ್ರ್ಯಾಕ್ ಮೇಲೆ ಆಕಸ್ಮಿಕವಾಗಿ ಬಿದ್ದಿರುವುದನ್ನು ಗಮನಿಸಿದ ಮಯೂರ್ ತನ್ನ ಪ್ರಾಣ ಪಣಕ್ಕಿಟ್ಟು ರೈಲಿಗೆ ಎದುರಾಗಿ ಓಡಿ ಕೂದಲೆಳೆ ಅಂತರದಲ್ಲಿ ಮಗುವನ್ನು ರಕ್ಷಿಸಿದ್ದರು.
ಇನ್ನು ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಯನ್ನು ರೈಲ್ವೆ ಇಲಾಖೆ ಸಚಿವ ಪಿಯೂಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು.
ಮಯೂರ್ ಅವರ ಈ ಮಾನವೀಯತೆ ಗುಣಕ್ಕಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮಯೂರ್ ಗೆ 50,000 ರೂ. ಬಹುಮಾನ ಘೋಷಿಸಿದ್ದು, ವಿಶೇಷವೆಂದರೆ ತನಗೆ ಬಂದ ಬಹುಮಾನದ ಅರ್ಧ ಭಾಗದ ಹಣವನ್ನು ಆ ಮಗುವಿನ ಶಿಕ್ಷಣಕ್ಕಾಗಿ ಖರ್ಚು ಮಾಡುವುದಾಗಿ ಮಯೂರ್ ಘೋಷಿಸಿ ಮಗುವಿನ ಕುಟುಂಬದ ಆರ್ಥಿಕ ಪರಿಸ್ಥಿತಿ ಸದೃಢವಾಗಿ ಇಲ್ಲ ಎಂದು ನನಗೆ ತಿಳಿದಿದೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.