ಕಣ್ಣೂರು,ಏ 23 (DaijiworldNews/MS): ಕಣ್ಣೂರು ಕೇಂದ್ರ ಕಾರಾಗೃಹದ ಅವರಣದಲ್ಲಿರುವ ಪ್ರೀಢಂ ಫುಡ್ ಪ್ಯಾಕ್ಟರಿಗೆ ಕನ್ನ ಹಾಕಿದ ದರೋಡೆಕೋರರು 1.94 ಲಕ್ಷ ಎಗರಿಸಿರುವ ಘಟನೆ ನಡೆದಿದ್ದು ಇದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದೊಡ್ಡಿದೆ.
ಜೈಲಿನ ಭದ್ರತೆಯನ್ನು ಭಾರತ ರಿಸರ್ವ್ ಬೆಟಾಲಿಯನ್ ನೋಡಿಕೊಳ್ಳುತ್ತಿದ್ದು, ಮಾತ್ರವಲ್ಲದೆ ಪೊಲೀಸ್ ಗಸ್ತು 24 ಗಂಟೆಗಳಿರುವ ಕಣ್ಣೂರು ಜೈಲಿನ ಅವರಣದಲ್ಲಿರುವ ಹಾಗೂ ಜೈಲಿನಿಂದ ಕೇವಲ 10 ಮೀಟರ್ ದೂರದಲ್ಲಿರುವ ಆಹಾರ ವಿತರಣಾ ಕೇಂದ್ರ ಕಚೇರಿಯ ಆಡಳಿತ ವಿಭಾಗದಲ್ಲಿ ಈ ಕಳ್ಳತನ ನಡೆದಿದೆ.
ಆಹಾರ ಕಾರ್ಖಾನೆಯ ಕಚೇರಿಯನ್ನು ಬುಧವಾರ ಕಾರ್ಯಾಚರಿಸಿದ್ದು, ಬುಧವಾರದ ಸಂಗ್ರಹಿಸಿದ 1.94 ಲಕ್ಷವನ್ನು ಲೆಕ್ಕಹಾಕಿ ಗುರುವಾರ ಬ್ಯಾಂಕಿನಲ್ಲಿ ಠೇವಣಿ ಇಡಲೆಂದು ಸಿದ್ದಮಾಡಿ ಇಡಲಾಗಿತ್ತು. ಗುರುವಾರ ಬೆಳಗ್ಗೆ ಜೈಲು ಅಧೀಕ್ಷಕರು ಬಂದಾಗ ಆಹಾರ ವಿತರಣಾ ಕೇಂದ್ರ ಕಚೇರಿಯ ಬೀಗ ಮುರಿದು ಬಿದ್ದಿದ್ದು ಈ ವೇಳೆ ಹಣ ಕಳ್ಳತನವಾಗಿರುವುದು ಗಮನಕ್ಕೆಬಂದಿದೆ.
ಈ ಪ್ರದೇಶದಲ್ಲಿ ಸುಮಾರು ಒಂದು ಡಜನ್ ನಾಯಿಗಳಿದ್ದು ಅವುಗಳು ಸಣ್ಣದೊಂದು ಚಲನೆಯದರೂ ವಿಚಲಿತರಾಗುತ್ತವೆ. ಅದರೂ ಬುಧವಾರ ರಾತ್ರಿ, ದರೋಡೆ ನಡೆದ ದಿನ, ಜೈಲು ಅಧಿಕಾರಿಗಳಿಗೆ ಯಾವುದೇ ಅಹಿತಕರ ಶಬ್ದಅನುಭವಕ್ಕೆ ಬಂದಿರಲಿಲ್ಲ. ಹೀಗಾಗಿ ಹೊರಗಿನಿಂದ ಯಾರೂ ಆವರಣಕ್ಕೆ ಪ್ರವೇಶಿಸಿ ಹಣವನ್ನು ದೋಚಲು ಸಾಧ್ಯವಿಲ್ಲ. ಜೈಲಿನ ಆಗುಹೋಗುಗಳ ಬಗ್ಗೆ ಚೆನ್ನಾಗಿ ಅರಿವಿದ್ದಾತನೇ ಕಳ್ಳತನ ನಡೆಸಿದ್ದಾನೆ ಎಂದು ಪೊಲೀಸರು ಸಂಶಯಪಟ್ಟಿದ್ದಾರೆ.
ಕಣ್ಣೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಫೋರೆನ್ಸಿಕ್ ತಂಡ ಮತ್ತು ಶ್ವಾನ ದಳ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದೆ, ಡಿಜಿಪಿ ನೇತೃತ್ವದಲ್ಲಿ ಇಲಾಖೆ ನೇತೃತ್ವದ ತನಿಖೆ ಕೂಡ ಪ್ರಗತಿಯಲ್ಲಿದೆ