ಹರಿಯಾಣ, ಏ.23 (DaijiworldNews/HR): ಆಸ್ಪತ್ರೆಯಿಂದ ಕದ್ದಿದ್ದ ಬಾಕ್ಸ್ನಲ್ಲಿ ಕೊರೊನಾ ವ್ಯಾಕ್ಸಿನ್ ಇದ್ದಿದ್ದನ್ನು ಕಂಡ ಕಳ್ಳರು ಬಾಕ್ಸನ್ನು ಪೊಲೀಸ್ ಠಾಣೆಯ ಬಳಿ ಬಿಟ್ಟು ಹೋಗಿ ಜೊತೆಗೊಂದು ಪತ್ರವನ್ನೂ ಬರೆದು ನಮ್ಮನ್ನು ಕ್ಷಮಿಸಿ. ಬಾಕ್ಸ್ನಲ್ಲಿ ವ್ಯಾಕ್ಸಿನ್ ಇದೆ ಎಂದು ತಿಳಿಯದೇ ಕದ್ದಿದ್ದಕ್ಕೆ ಕ್ಷಮೆ ಇರಲಿ ಎಂದು ಬರೆದ ಮೂಲಕ ಕಳ್ಳನೊಬ್ಬ ಪೊಲೀಸರ ಮನಗೆದ್ದಿದ್ದಾರೆ.
ಬುಧವಾರ ರಾತ್ರಿ ಜಿಂದ್ ಜಿಲ್ಲೆಯ ಆಸ್ಪತ್ರೆಗೆ ನುಗ್ಗಿದ್ದ ಕಳ್ಳರು ಸ್ಟೋರ್ ರೂಂನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು, ಬಳಿಕ ಆಸ್ಪತ್ರೆಯ ಹೆಡ್ ನರ್ಸ್ ಬಂದು ನೋಡುವಷ್ಟರಲ್ಲಿ ಔಷಧಿ ದಾಸ್ತಾನು ಕೊಠಡಿಯ ಬೀಗ ಮುರಿದಿದ್ದು, ಒಳಗೆ ಪರಿಶೀಲಿಸಿದಾಗ ವ್ಯಾಕ್ಸಿನ್ ಇದ್ದ ಬಾಕ್ಸ್ ಕಣ್ಮರೆಯಾಗಿತ್ತು. ವ್ಯಾಕ್ಸಿನ್ ಕಳವಿನಿಂದ ಜಿಲ್ಲೆಯಲ್ಲಿ ವಿತರಿಸಲು ಲಸಿಕೆ ಇಲ್ಲದಂತಾಗಿದ್ದು ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು.
2 ದಿನಗಳ ನಂತರ ಆಸ್ಪತ್ರೆಯಲ್ಲಿ ಕಳುವಾಗಿದ್ದ ಲಸಿಕೆಗಳಿದ್ದ ಬಾಕ್ಸ್ ಸ್ಥಳೀಯ ಪೊಲೀಸ್ ಠಾಣೆಯ ಬಳಿ ಪತ್ತೆಯಾಗಿದ್ದು, ಬಾಕ್ಸ್ನಲ್ಲಿ 182 ವೈಯಲ್ಸ್ ಕೋವಿಶೀಲ್ಡ್ ಹಾಗೂ 440 ಡೋಸೇಜ್ ಕೊವ್ಯಾಕ್ಸಿನ್ ಲಸಿಕೆ ಹಾಗೆಯೇ ಇದ್ದವು. ಬಾಕ್ಸ್ ಜೊತೆ ಕಳ್ಳರು ಬರೆದಿದ್ದ ಪತ್ರವೂ ಸಿಕ್ಕಿದ್ದು ಗೊತ್ತಿಲ್ಲದೇ ನಾವು ವ್ಯಾಕ್ಸಿನ್ ಇದ್ದ ಬಾಕ್ಸನ್ನು ಕದ್ದಿದ್ದೇವೆ. ಹೀಗಾಗಿ ಬಾಕ್ಸನ್ನು ಹಿಂತಿರುಗಿಸುತ್ತಿದ್ದೇವೆ. ಕ್ಷಮೆ ಇರಲಿ ಎಂದು ಹಿಂದಿಯಲ್ಲಿ ಬರೆದಿದ್ದಾರೆ.
ಇನ್ನು ಪೊಲೀಸ್ ಠಾಣೆಯ ಟೀ ಅಂಗಡಿ ಬಳಿ ವ್ಯಾಕ್ಸಿನ್ ಬಾಕ್ಸ್ ಇಟ್ಟು ಹೋದ ಕಳ್ಳರಿಗಾಗಿ ಹುಡುಕಾಟ ನಡೆಸಲಾಗಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಾಕ್ಸನ್ನು ತಂದಿಟ್ಟಿರುವುದು ಗೊತ್ತಾಗಿದೆ.