ಬೆಂಗಳೂರು, ಏ. 22(DaijiworldNews/HR): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತಿದ್ದು, ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 400 ಕೋಟಿ ವೆಚ್ಚದಲ್ಲಿ 1 ಕೋಟಿ ಲಸಿಕೆ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್ "ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರು ಮೊದಲ ಹಂತದಲ್ಲಿ 400 ಕೋಟಿ ವೆಚ್ಚದಲ್ಲಿ 1 ಕೋಟಿ ಡೋಸ್ ವ್ಯಾಕ್ಸಿನ್ ಖರೀದಿಸಲು ಅನುಮೋದನೆ ನೀಡಿದ್ದಾರೆ. ಈ ವ್ಯಾಕ್ಸಿನ್ ನ್ನು 18 ರಿಂದ 44 ವರ್ಷದವರೆಗಿನ ವ್ಯಕ್ತಿಗಳಿಗೆ ನೀಡಲು ಬಳಸಲಾಗುವುದು" ಎಂದಿದ್ದಾರೆ.
ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 15,244 ಜನರು ಸೇರಿದಂತೆ ರಾಜ್ಯಾಧ್ಯಂತ 25,795 ಜನರಿಗೆ ಹೊಸದಾಗಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,47,997ಕ್ಕೆ ಏರಿಕೆಯಾಗಿದೆ.