ಮೈಸೂರು, ಏ. 22(DaijiworldNews/HR): "ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟವಾದರೆ ಡ್ರಗ್ಸ್ ಕಂಟ್ರೋಲರ್ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, "ಔಷಧಿಗಳ ಕಾಳಸಂತೆ ಮಾರಾಟದ ಬಗ್ಗೆ ಬಿಗಿ ಕ್ರಮ ಕೈಗೊಳ್ಳುಬೇಕು" ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ಮೆಡಿಕಲ್ ಕಾಲೇಜಿನಷ್ಟೇ ಮೈಸೂರು ಮೆಡಿಕಲ್ ಕಾಲೇಜು ಶಕ್ತವಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ 2000 ಹಾಸಿಗೆಗಳಿದ್ದು, ಇಲ್ಲಿನ ಆಡಳಿತ ಇನ್ನೂ ಚುರುಕಾಗಬೇಕು. 2 ರಿಂದ 3 ದಿನಗಳಲ್ಲಿ ಕೋವಿಡ್ ಚಿಕಿತ್ಸೆಗೆ 1000 ಹಾಸಿಗೆ ವ್ಯವಸ್ಥೆ ಮಾಡಬೇಕು. ಸೋಂಕಿತರನ್ನು ಬೇಗ ಗುರುತಿಸಿದರೆ ಚಿಕಿತ್ಸೆ ನೀಡಿದರೆ ಬೇಗ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತದಿಂದ ಉತ್ತಮ ಕೆಲಸ ಆಗಿದೆ. ಲಸಿಕೆಯನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗಿದೆ" ಎಂದರು.
ಇನ್ನು ಸುಮಾರು ಶೇ.95 ರಷ್ಟು ಸೋಂಕಿತರಿಗೆ ಆಸ್ಪತ್ರೆಗೆ ಸೇರಿಸುವುದೇ ಬೇಕಾಗಿಲ್ಲ. ಅವರಿಗೆ ಸೂಕ್ತ ಟೆಲಿಮೆಡಿಷನ್ ಮಾಡಿದರೆ ಮನೆಯಲ್ಲೇ ಗುಣಪಡಿಸಬಹುದಾಗಿದ್ದು, ಇದರ ಬಗ್ಗೆ ಆತಂಕ ಬೇಡ" ಎಂದು ಹೇಳಿದ್ದಾರೆ.