ಬೆಂಗಳೂರು, ಎ.22 (DaijiworldNews/PY): "ರಾಜ್ಯ ಸರ್ಕಾರ ಅಘೋಷಿತ ಲಾಕ್ಡೌನ್ ಜಾರಿಗೊಳಿಸಿದೆ. ಬಡವರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲಾ ಅರ್ಹರಿಗೆ ಕೂಡಲೇ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು" ಎಂದು ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯ ಸರ್ಕಾರ ಅಘೋಷಿತ ಲಾಕ್ಡೌನ್ ಜಾರಿಗೊಳಿಸಿದೆ. ಬಡವರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲಾ ಅರ್ಹರಿಗೆ ಕೂಡಲೇ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು. ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಸಣ್ಣ ಹಾಗೂ ಮಧ್ಯಮ ಉದ್ಯಮ, ಕೈಗಾರಿಕೆಗಳ ನೆರವಿಗೆ ಅಗತ್ಯ ಕ್ರಮ ಕೈಗೊಂಡು ಉದ್ಯೋಗ ಹಾಗೂ ಆರ್ಥಿಕ ನಷ್ಟವಾಗದಂತೆ ನೋಡಿಕೊಳ್ಳಬೇಕು" ಎಂದು ಒತ್ತಾಯಿಸಿದೆ.
"ಕೇಂದ್ರ ಸರ್ಕಾರಕ್ಕೆ ಸುಮಾರು 10 ಕೋಟಿಗೂ ಹೆಚ್ಚು ಡೋಸ್ಗಳನ್ನು 150 ರೂ ಗಳಿಗೆ ನೀಡಿದ್ದ ಲಸಿಕೆ ಕಂಪೆನಿಗಳು ಹೊಸದಾಗಿ ಪರಿಷ್ಕರಣೆ ಮಾಡಿ ರಾಜ್ಯಗಳಿಗೆ ₹400 ದರ ನಿಗದಿಪಡಿಸಿವೆ. ರಾಜ್ಯದ ಸೋಂಕಿತಸರ್ಕಾರ ಸರ್ವರಿಗೂ ಉಚಿತ ಲಸಿಕೆ ನೀಡುವ ಘೋಷಣೆಯನ್ನೇಕೆ ಮಾಡುತ್ತಿಲ್ಲ? ಲಸಿಕೆ ಖರೀದಿಗೆ ಹಣ ಕ್ರೋಡೀಕರಣದ ಬಗ್ಗೆ ಏಕೆ ಯೋಚಿಸುತ್ತಿಲ್ಲ?" ಎಂದು ಕೇಳಿದೆ.
"ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರಿಗೆ ನಿರ್ಬಂಧವಿಲ್ಲ, ಗಡಿಗಳನ್ನು ಬಂದ್ ಮಾಡಿಲ್ಲ, ಹೀಗಿರುವಾಗ ಸೋಂಕಿತರನ್ನು ಸೋಂಕನ್ನು ನಿಯಂತ್ರಿಸುವುದು ಹೇಗೆ ಸಿಎಂ ಯಡಿಯೂರಪ್ಪ ಅವರೇ? ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಸೋಂಕಿತಸರ್ಕಾರ ಸೋಂಕು ನಿಯಂತ್ರಣಕ್ಕೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸಿಲ್ಲ, ನಿಮ್ಮ ನೈಟ್ ಕರ್ಫ್ಯು ಸೋಂಕನ್ನು ತಡೆಯದು" ಎಂದು ಹೇಳಿದೆ.
"ಬಿಜೆಪಿ ಸರ್ಕಾರ ಒಂದಿಡೀ ವರ್ಷದಲ್ಲಿ ನೀವು ಕಲಿತ ಪಾಠವೇನು? ಮಾಡಿಕೊಂಡ ಸಿದ್ಧತೆ ಏನು? ಪಿಎಂ ಕೇರ್ಸ್ನಲ್ಲಿ ರಾಜ್ಯಕ್ಕೆ ಹೆಚ್ಚಿನ ವೆಂಟಿಲೇಟರ್ಗಳಿಗೆ ಏಕೆ ಬೇಡಿಕೆ ಇಟ್ಟಿಲ್ಲ? ಕಳೆದ ನವೆಂಬರ್ನಲ್ಲಿಯೇ ತಜ್ಞರು ಎಚ್ಚರಿಕೆ ನೀಡಿದ್ದಾಗ್ಯೂ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ?" ಎಂದು ಪ್ರಶ್ನಿಸಿದೆ.
"ಸೋಂಕಿತರು ಬೆಡ್ ಸಿಗದೆ ಪರದಾಡುತ್ತಿದ್ದಾರೆ, ಬಿಜೆಪಿ ಸರ್ಕಾರ ಕಳೆದ ಭಾರಿ 10 ಸಾವಿರ ಹಾಸಿಗೆಗಳ ಕೋವಿಡ್ ಸೆಂಟರ್ನ್ನು ಬಳಕೆಯೇ ಮಾಡದೆ ಮುಚ್ಚಿದಿರಿ, ಅದೊಂದು ಲೂಟಿ ಕಾರ್ಯಕ್ರಮವಾಗಿತ್ತಲ್ಲವೇ? ಈಗ ಏಕೆ ಅಂತಹ ಸೆಂಟರ್ ನಿರ್ಮಿಸಲು ಮುಂದಾಗುತ್ತಿಲ್ಲ?" ಎಂದು ಕೇಳಿದೆ.
"ಕರೋನಾ ನಿಗ್ರಹಿಸುವಿಕೆಯ ಭಾಗವಾದ ಟ್ರೀಟಿಂಗ್ನಲ್ಲಿ ಅಧೋಗತಿಗೆ ಇಳಿದಿದ್ದು ನಿತ್ಯ ಕಾಣುತ್ತಿದೆ.ಟ್ರಾಕಿಂಗ್ನಲ್ಲಿಯೂ ಸರ್ಕಾರ ವಿಫಲವಾಗಿದೆ. ಬಿಎಸ್ವೈ ಸೇರಿದಂತೆ, ಮಂತ್ರಿಗಳು, ಶಾಸಕರಿಗೆ ಸೋಂಕು ತಗುಲಿತ್ತು, ಅವರ ಸಂಪರ್ಕಕ್ಕೆ ಬಂದವರಿಗೆ ಯಾವುದೇ ಕಟ್ಟುನಿಟ್ಟಿನ ಐಸೋಲೇಶನ್ ನಿಯಮ ಪಾಲಿಸಲಿಲ್ಲ. ಇದೇ ಸೋಂಕಿತಸರ್ಕಾರ ದ ವೈಫಲ್ಯಕ್ಕೆ ಸಾಕ್ಷಿ" ಎಂದು ಆರೋಪಿಸಿದೆ.
"ಫೇಕ್ ನ್ಯೂಸ್ ಫ್ಯಾಕ್ಟರಿ ಎಂದೇ ಕುಖ್ಯಾತಿ ಪಡೆದಿರುವ ಬಿಜೆಪಿ ಐಟಿ ಸೆಲ್ ಉತ್ತರಿಸಲಿದೆಯೇ? ಗುಜರಾತ್, ಯುಪಿಯ ಬಿಜೆಪಿ ಸರ್ಕಾರಗಳಿಗೆ ಅಲ್ಲಿನ ಹೈಕೋರ್ಟ್ಗಳು ಮುಖಕ್ಕೆ ಉಗಿದಿವೆ. ಆಕ್ಸಿಜನ್ ಪೂರೈಸದ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಛಿಮಾರಿ ಹಾಕಿದೆ. ಇದೆಲ್ಲವೂ ನಿಮ್ಮ ಆಯೋಗ್ಯತನದ ಪ್ರತೀಕವಲ್ಲವೇ?" ಎಂದು ಪ್ರಶ್ನಿಸಿದೆ.
"ಬಿಎಸ್ವೈ ಅವರೇ, ಕರೋನಾ ನಿರ್ವಹಣೆಯಲ್ಲಿ ನಿಮ್ಮ ಸೋಂಕಿತಸರ್ಕಾರ ಸಂಪೂರ್ಣ ಸೋತಿದೆ. ಬೆಡ್, ಆಕ್ಸಿಜನ್, ರೆಮಿಡಿಸಿವಿರ್, ಅಂತ್ಯಕ್ರಿಯೆ, ಹೀಗೆ ಹಲವು ಬಿಕ್ಕಟ್ಟುಗಳನ್ನ ನಿರ್ವಹಿಸಲು ಮಂತ್ರಿಗಳನ್ನು ನೇಮಿಸಿ ಜವಾಬ್ದಾರಿಯನ್ನು ನೀಡಿ. ಇಡೀ ರಾಜ್ಯವನ್ನು 6 ವಿಬಾಗವನ್ನಾಗಿಸಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಮಂತ್ರಿಗಳಿಗೆ ಉಸ್ತುವಾರಿ ನೀಡಿ" ಎಂದು ಆಗ್ರಹಿಸಿದೆ.
"ಬಿಜೆಪಿ ಸರ್ಕಾರದೊಳಗೆ ಸಮನ್ವಯತೆ, ಸಾಮರಸ್ಯದ ಕೊರತೆ ಇದೆ, ಹೀಗಿರುವಾಗ ಕೋವಿಡ್ ಕೊರತೆಗಳ ಬಗ್ಗೆ ಗಮನ ಹರಿಸುವ ಇಚ್ಛಾಶಕ್ತಿ ಒಬ್ಬರಿಗೂ ಇಲ್ಲ. ಸಚಿವರಲ್ಲಿನ ಮುನಿಸು, ಭಿನ್ನಾಭಿಪ್ರಾಯ ಎದ್ದು ಕಾಣುತ್ತಿದೆ, ಅವರೇನಾದ್ರೂ ಮಾಡಿಕೊಳ್ಳಲಿ ಎನ್ನುವ ಧೋರಣೆಗಳು ಕಾಣುತ್ತಿವೆ ಕಿತ್ತಾಟದ ಸೋಂಕಿತಸರ್ಕಾರ ಕರೋನಾ ಸೋಂಕನ್ನು ನಿರ್ವಹಿಸಲಾಗದು" ಎಂದಿದೆ.