ಬೆಂಗಳೂರು, ಏ.22 (DaijiworldNews/MB) : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಗುರುವಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿದೆ. ರಾಜ್ಯದಲ್ಲಿ ಭಾಗಶಃ ಲಾಕ್ಡೌನ್ನ ಸ್ಥಿತಿ ಇರಲಿದೆ.
ಈ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಶಾಲೆ, ಕಾಲೇಜು, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ, ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಪಾ, ಈಜುಕೊಳ, ಕ್ರೀಡಾ ಸಂಕೀರ್ಣ, ಸಭಾಂಗಣ, ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಬಂದ್ ಮಾಡಬೇಕಿದೆ.
ಉಳಿದಂತೆ ಹೋಟೆಲ್ , ರೆಸ್ಟೋರೆಂಟ್, ಬಾರ್ಗಳಲ್ಲಿ ಪಾರ್ಸಲ್ ಕೊಂಡೊಯ್ಯಲು ಮಾತ್ರ ಅವಕಾಶವಿದೆ. ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಆಟೋ, ಬಸ್, ಮೆಟ್ರೋ ಸೇವೆಗಳು ಲಭ್ಯವಾಗಲಿದೆ.
ಹಾಗೆಯೇ ಬ್ಯಾಂಕ್, ಎಟಿಎಂ, ಇನ್ಶ್ಯೂರೆನ್ಸ್ ಕಂಪನಿ, ಪೇಪರ್, ಟಿವಿ ಸೇರಿದಂತೆ ವಿವಿಧ ಮೀಡಿಯಾ ಸಂಸ್ಥೆಗಳು ಕಾರ್ಯ ನಿರ್ವಹಿಸಬಹುದಾಗಿದೆ. ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಗಳಿಗೆ ಅನುಮತಿಸಲಾಗಿದೆ. ದಿನಸಿ, ಹಣ್ಣು, ಹೂವು ಅಂಗಡಿ, ತರಕಾರಿ ಅಂಗಡಿ, ಡೈರಿ, ಮಾಂಸ, ಔಷಧಿ, ಪ್ರಾಣಿಗಳ ಆಹಾರದ ಅಂಗಡಿಗೆ ಅನುಮತಿಸಲಾಗಿದೆ. ಹಾಗೆಯೇ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಆದರೆ ಎಲ್ಲಾ ವಿಭಾಗದಲ್ಲೂ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ತಿಳಿಸಿದೆ.
ಇ -ಕಾಮರ್ಸ್ ಸೇವೆಯ ಕಚೇರಿಗಳನ್ನು ತರೆಯಲು ಅವಕಾಶವಿದೆ. ಶೇರು ಮಾಡರುಕಟ್ಟೆ ನಡೆಸುವ ಸೇವಾ ಕಚೇರಿ, ಕೋಲ್ಡ್ ಸ್ಟೋರೆಜ್, ವೇರ್ಹೌಸ್ಗಳ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹೊಟೇಲ್, ಲಾಡ್ಜಿಂಗ್ ಹೊರಗಿನಿಂದ ಬಂದ ಅತಿಥಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.