ಕೋಲ್ಕತಾ, ಎ.22 (DaijiworldNews/PY): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊರೊನಾ ಲಸಿಕೆಯ ದರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಅವರು, "ಪ್ರತೀ ಖರೀದಿದಾರರಿಗೂ ಒಂದೇ ರೀತಿಯಾದ ದರ ನಿಗದಿಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಒಂದು ರಾಷ್ಟ್ರ, ಒಂದು ಪಕ್ಷ, ಒಬ್ಬ ನಾಯಕ ಎಂದು ಕೂಗುವ ಬಿಜೆಪಿ, ಜೀವ ಉಳಿಸುವ ಕೊರೊನಾ ಲಸಿಕೆಗೆ ಒಂದೇ ಬೆಲೆ ಇರಬೇಕು ಎಂದು ಏಕೆ ಹೇಳುತ್ತಿಲ್ಲ?" ಎಂದು ಕೇಳಿದ್ದಾರೆ.
"ಪ್ರತಿಯೋರ್ವ ಭಾರತೀಯನಿಗೂ ವಯಸ್ಸು, ಜಾತಿ, ಮತ, ಸ್ಥಳ ಏನೇ ಇರಲಿ ಉಚಿತ ಲಸಿಕೆಯನ್ನು ನೀಡಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯಗಳಿಗೆ ಯಾರು ಪಾವತಿ ಮಾಡುತ್ತಾರೋ ಎನ್ನುವುದನ್ನು ಲೆಕ್ಕಿಸದೇ ಕೊರೊನಾ ಲಸಿಕೆಗೆ ಒಂದೇ ಬೆಲೆಯನ್ನು ನಿಗದಿಪಡಿಸಬೇಕು" ಎಂದು ಹೇಳಿದ್ದಾರೆ.
"ರಾಜ್ಯ ಸರ್ಕಾರಗಳಿಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಲಸಿಕೆ 'ಕೋವಿಶೀಲ್ಡ್' ಗೆ ಪ್ರತಿ ಡೋಸ್ಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ಗೆ 600 ರೂ. ದರ ನಿಗದಿಪಡಿಸಲಾಗಿದೆ" ಎಂದು ಬುಧವಾರ ಪ್ರಕಟಿಸಿತ್ತು.