ಬೆಂಗಳೂರು, ಎ.22 (DaijiworldNews/PY): "ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ. ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿಯ ಮೂಲಕ ಜನರಲ್ಲಿ ಭೀತಿ ಮೂಡಿಸುತ್ತಿದ್ದಾರೆ" ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, "ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ. ದೇಶದಲ್ಲಿರುವ ಒಟ್ಟು ಏಮ್ಸ್ಗಳಲ್ಲಿ ಕಾಂಗ್ರೆಸ್ ಘೋಷಿಸಿದ್ದು ಬರೇ ಎರಡೇ ಎರಡು!. ಮೋದಿ ಸರ್ಕಾರ ಕೇವಲ 7 ವರ್ಷಗಳಲ್ಲಿ 11 ಏಮ್ಸ್ ನಿರ್ಮಿಸಿದೆ ಹಾಗೂ 3 ಪ್ರಗತಿಯಲ್ಲಿದೆ. ಫೇಕ್ನ್ಯೂಸ್ಫ್ಯಾಕ್ಟರಿ ಕಾಂಗ್ರೆಸ್ ಮಾತ್ರ ಎಲ್ಲವನ್ನೂ ನಾವೇ ಮಾಡಿದ್ದು ಎಂದು ಹೇಳುತ್ತಿದೆ" ಎಂದಿದೆ.
"ಕಾರ್ಖಾನೆಗಳು ಬಳಸುವ ಆಮ್ಲಜನಕದ ರಫ್ತಿನಲ್ಲಿ ಏರಿಕೆ ಕಂಡಿದೆ. ಇದನ್ನು ತಿರುಚಿರುವ ಕಾಂಗ್ರೆಸ್ ಪಕ್ಷದ ನಾಯಕರು, ಭಾರತ ವೈದ್ಯಕೀಯ ಆಮ್ಲಜನಕ ರಫ್ತು ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿಯ ಮೂಲಕ ಜನರಲ್ಲಿ ಭೀತಿ ಮೂಡಿಸುತ್ತಿದ್ದಾರೆ" ಎಂದು ಆರೋಪಿಸಿದೆ.
"ಸುಳ್ಳಿನೊಂದಿಗೆ ಹುಟ್ಟಿ ಸುಳ್ಳಿನೊಂದಿಗೆ ಬಾಳುತ್ತಿರುವ ಫೇಕ್ನ್ಯೂಸ್ಫ್ಯಾಕ್ಟರಿ ಕಾಂಗ್ರೆಸ್ ಈಗ ಆಕ್ಸಿಜನ್ ಕುರಿತು ಜನರಲ್ಲಿ ಭಯ ಹುಟ್ಟಿಸುತ್ತಿದೆ. ಇಂಡಸ್ಟ್ರಿಯಲ್ ಹಾಗೂ ಮೆಡಿಕಲ್ ಆಕ್ಸಿಜನ್ ನಡುವಿನ ವ್ಯತ್ಯಾಸ ಅರಿಯದೆ ಸುಳ್ಳುಸುದ್ದಿ ಹಬ್ಬಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸುಳ್ಳುಸುದ್ದಿ ಹರಡುವ ಮಾರಕ ಖಾಯಿಲೆ ಅಂಟಿಕೊಂಡಿದೆ" ಎಂದು ಹೇಳಿದೆ.
"ಕೋವಿಡ್ ಸಾಂಕ್ರಾಮಿಕವನ್ನು ಕಾಂಗ್ರೆಸ್ ಹೇಗೆ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ವಯನಾಡಿನ ಸಂಸದ ರಾಹುಲ್ ಗಾಂಧಿ ಅವರೇ ಸಾಕ್ಷಿ. ನಿರ್ಧರಿತವಾಗದ ಪ್ರಚಾರ ಸಭೆಯನ್ನೇ ರದ್ದು ಮಾಡಿದ ಖ್ಯಾತಿ ಯುವರಾಜನಿಗೆ ಸಲ್ಲುತ್ತದೆ. ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಬಲ್ಲರು" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಕೋವಿಡ್ ಲಸಿಕೆಯ ಬಗ್ಗೆ ಆರಂಭದಲ್ಲಿ ವಿಶ್ವಾಸ ವ್ಯಕ್ತಪಡಿಸದ ಕಾಂಗ್ರೆಸ್ ನಂತರ ಅದೇ ಲಸಿಕೆಯನ್ನು ಉಚಿತವಾಗಿ ನೀಡಿ ಎಂಬ ತಗಾದೆ ತೆಗೆಯಿತು. ನಂತರ ಲಸಿಕೆಯ ದರದ ಬಗ್ಗೆ ಇನ್ನಿಲ್ಲದ ಅಪಪ್ರಚಾರ ಮಾಡಿತು. ಆದರೆ ಜಗತ್ತಿನ ಯಾವುದೇ ದೇಶಕ್ಕೂ ಹೋಲಿಸಿದರೂ ನಮ್ಮ ದೇಶದಲ್ಲಿ ಲಸಿಕೆಯ ದರ ಅತ್ಯಲ್ಪವಾಗಿದೆ" ಎಂದು ಹೇಳಿದೆ.
"ಮೋದಿ ಸರ್ಕಾರವನ್ನು ಟೀಕಿಸುವ ಕಾಂಗ್ರೆಸ್ ಪಕ್ಷ, ತಾನು ಆಡಳಿತ ಇರುವ ರಾಜ್ಯಗಳಲ್ಲಿ ಮಾಡಿದ್ದೇನು? ಬಿಜೆಪಿ ಆಡಳಿತ ಇರುವ ರಾಜ್ಯಗಳ ವಾಸ್ತವ ಸ್ಥಿತಿಯ ಬಗ್ಗೆ ಸದಾ ಸುಳ್ಳು ಸುದ್ದಿ ಹಬ್ಬಿಸುವ ಕಾಂಗ್ರೆಸ್, ನಕಲಿ ಗಾಂಧಿ ಕುಟುಂಬದ ಕೃಪೆಯಿರುವ ರಾಜ್ಯಗಳ ಬಗ್ಗೆ ಏಕೆ ಮೌನವಾಗಿದೆ?" ಎಂದು ಪ್ರಶ್ನಿಸಿದೆ.