ವಿಜಯಪುರ, ಏ. 22(DaijiworldNews/HR): ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ರಾಜ್ಯದ ರೋಗಿಗಳಿಗೆ ಆಕ್ಸಿಜನ್ ಕೊರತೆ ಇದೆ. ಇಂಥ ಸ್ಥಿತಿಯಲ್ಲಿ ರಾಜ್ಯದ ಜಿಂದಾಲ್ ಸಂಸ್ಥೆ ಉತ್ಪಾದಿಸುವ ಅರ್ಧ ಆಕ್ಸಿಜನ್ ಮಹಾರಾಷ್ಟ್ರ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ರಾಜ್ಯದಲ್ಲೇ ಕೊರತೆ ಇರುವಾಗ ಅನ್ಯರಿಗೆ ಕಳಿಸುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಮಾಜಿ ಸಚಿವ, ಶಾಸಕ ಡಾ.ಎಂ.ಬಿ. ಪಾಟೀಲ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ಆಕ್ಸಿಜನ್ ನೆರವು ನೀಡುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಆದರೂ ರಾಜ್ಯದಲ್ಲೇ ಕೊರತೆ ಇದ್ದು, ನಮಗೆ ಸರಿದೂಗಿದ ಬಳಿಕ ಅನ್ಯರ ನೆರವಿಗೆ ನಿಲ್ಲಬೇಕು, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ" ಎಂದರು.
"ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಸಿಗುತ್ತಿಲ್ಲ, ರೆಮಿಡಿಸಿವಿರ್ ಸೇರಿ ಪ್ರಮುಖ ಔಷಧ ಕೊರತೆ ಇದೆ. ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆ ಹೀಗೆ ಹಲವು ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಹೀಗಾಗಿ ಕೂಡಲೇ ಈ ಸಮಸ್ಯೆ ಬಗೆ ಹರಿಸಲು ಸರ್ಕಾರ ಆದ್ಯತೆ ನೀಡಬೇಕು" ಎಂದು ಹೇಳಿದ್ದಾರೆ.