ಕೋಲಾರ, ಎ.22 (DaijiworldNews/PY): "ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನೋಡಿದರೆ ನನಗೂ ಭಯ ಎನಿಸಿದೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
"ಕೊರೊನಾದ ಮೊದಲ ಅಲೆಯಲ್ಲಿ ಯಾವುದೇ ಆತಂಕ ಇರಲಿಲ್ಲ. ನಾನು ಕೂಡಾ ಮಾಸ್ಕ್ ಧರಿಸಿರಲಿಲ್ಲ. ಆದರೆ, ಸದ್ಯದ ಪರಿಸ್ಥಿಯಲ್ಲಿ ನನಗೆ ಮನೆಯಿಂದ ಹೊರ ಹೋಗಲು ಭಯವಾಗುತ್ತದೆ. ನಾನು ಕೂಡಾ ಭಯಗೊಂಡಿದ್ದೇನೆ" ಎಂದಿದ್ದಾರೆ.
"ಕೊರೊನಾದ ಎರಡನೇ ಅಲೆಯಿಂದ ಇಡೀ ಸಮಾಜಕ್ಕೆ ಹೆದರಿಕೆಯಾಗಿದೆ. ಸರ್ಕಾರದ ಮಾರ್ಗಸೂಚಿಯನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು. ಮಾನವನ ಬದುಕು ಉಳಿಯಬೇಕು ಎನ್ನುವ ಪ್ರಜ್ಞೆ ಎಲ್ಲರಲ್ಲೂ ಇರಬೇಕು" ಎಂದು ಹೇಳಿದ್ದಾರೆ.
"ಕೊರೊನಾ ಬಿಕ್ಕಟ್ಟನ್ನು ಇಡೀ ದೇಶವೇ ಎದುರಿಸುತ್ತಿದೆ. ಸಣ್ಣತನಬಿಟ್ಟು ನಾವೆಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು" ಎಂದಿದ್ದಾರೆ.