ಬೆಂಗಳೂರು, ಏ.22 (DaijiworldNews/MB) : ''ಶವ ಸಂಸ್ಕಾರ ಮಾಡುವ ಸ್ಥಳದಲ್ಲೂ ಪೊಲೀಸರನ್ನು ನೇಮಿಸುತ್ತೇವೆ'' ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕೊರೊನಾ ಸೋಂಕು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಅಧಿಕವಾಗುತ್ತಿದೆ. ಮೃತರ ಅಂತ್ಯಕ್ರಿಯೆಗೆ ಸಮಸ್ಯೆ ಉಂಟಾಗಿದೆ. ಶವಸಂಸ್ಕಾರಕ್ಕೂ ಸಾಲು ನಿಲ್ಲುವ ಸ್ಥಿತಿ ಎದುರಾಗಿದೆ.
ಏತನ್ಮಧ್ಯೆ ಗೃಹ ಸಚಿವ ಬೊಮ್ಮಾಯಿ ಅವರು ''ಶವಸಂಸ್ಕಾರದ ಸ್ಥಳದಲ್ಲೂ ಪೊಲೀಸರನ್ನು ನಿಯೋಜನೆ ಮಾಡುತ್ತೇವೆ'' ಎಂದು ಹೇಳಿದ್ದಾರೆ.
''ಈಗಾಗಲೇ ಕಂದಾಯ ಸಚಿವರು ಶವ ಸಂಸ್ಕಾರಕ್ಕೆ ಸ್ಥಳದ ಪರಿಶೀಲನೆ ನಡೆಸಿದ್ದು ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಇಂದು ಅಥವಾ ನಾಳೆ ಶವಸಂಸ್ಕಾರ ನಡೆಯುತ್ತದೆ'' ಎಂದು ತಿಳಿಸಿದ್ದಾರೆ.
''ಕೊರೊನಾ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದ್ದು ಎಲ್ಲಾ ಸಚಿವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ವೇಗವಾಗಿ ಹರಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಇದರ ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.