ನವದೆಹಲಿ, ಏ. 22(DaijiworldNews/HR): ಭಾರತದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ, ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದ್ದು, ಆಕ್ಸಿಜನ್ ಪೂರೈಕೆಯಿಲ್ಲ ದಾಖಲಾತಿ ಸ್ಥಗಿತಗೊಳಿಸಬೇಕಾಗಿದೆ, ಇದಕ್ಕಾಗಿ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ದೆಹಲಿಯ ಆಸ್ಪತ್ರೆಯೊಂದರಲ್ಲಿ ಬೋರ್ಡ್ ಹಾಕಿದ ಘಟನೆ ನಡೆದಿದೆ.
ದೆಹಲಿಯ ಶಾಂತಿ ಮುಕಂದ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಾಗದೇ, ದಾಖಲಾತಿ ಸ್ಥಗಿತಗೊಳಿಸಬೇಕಾಗಿದೆ ಎಂದು ಆಸ್ಪತ್ರೆಯ ಮುಂದೆ ತಗುಲು ಹಾಕಿರುವ ಬೋರ್ಡ್ ಕೊರೊನಾದ ಭೀಕರತೆ ಹಾಗೂ ಸರ್ಕಾರದ ವೈಫಲ್ಯವನ್ನು ಸಾರಿ ಹೇಳುವಂತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ಅಧಿಕಾರಿಗಳು "ನಾವು ಆಮ್ಲಜನಕದ ಅಗತ್ಯವಿಲ್ಲದ ರೋಗಿಗಳನ್ನು ಮತ್ತು 7 ಲೀಟರ್ಗಿಂತ ಹೆಚ್ಚಿನ ಆಮ್ಲಜನಕದ ಅಗತ್ಯವಿರುವ ರೋಗಿಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಲ್ಲಿಯೂ ಆಮ್ಲಜನಕದ ಕೊರತೆ ಇದ್ದು ದೆಹಲಿ ಹೈಕೋರ್ಟ್ಗೆ ತುರ್ತು ಆಮ್ಲಜನಕವನ್ನು ಪೂರೈಸಬೇಕೆಂದು ಕೋರಿದ್ದಾರೆ.
ದೇಶದಾದ್ಯಂತ ಕೊರೊನಾ ಪ್ರಕರಣಗಳು ಇದೇ ರೀತಿಯಾಗಿ ಮುಂದುವರೆದಲ್ಲಿ ಜೊತೆಗೆ ಆಕ್ಸಿಜನ್ ಪೂರೈಕೆಯು ಇಲ್ಲದಲ್ಲಿ ಸಾವಿನ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.