ಬೆಂಗಳೂರು, ಎ.22 (DaijiworldNews/PY): "ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿದೆ. ನಕಲಿ ಟೆಸ್ಟಿಂಗ್, ಸ್ಯಾಂಪಲ್ಸ್ ಜಾಲ ಬೆಳಕಿಗೆ ಬಂದರೂ ಕೈಕಟ್ಟಿ ಕುಳಿತ ಭ್ರಷ್ಟ ಸರ್ಕಾರ" ಎಂದು ಕಾಂಗ್ರೆಸ್ ಬಿಜೆಪಿಯ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಈ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಕೋವಿಡ್ ಟೆಸ್ಟಿಂಗ್ನಲ್ಲಿ ವ್ಯಾಪಕ ಗೋಲ್ಮಾಲ್ ನಡೆಯುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸುಳ್ಳು ರಿಪೋರ್ಟ್ಗಳು, ನಕಲಿ ಸ್ಯಾಂಪಲ್ಗಳು, ಸೋಂಕಿತರ ನಕಲಿ ಅಂಕಿ ಅಂಶಗಳು. ಭ್ರಷ್ಟಚಾರದ ಸೋಂಕಿತಸರ್ಕಾರದಿಂದ ಕರೋನಾ ಸೋಂಕು ನಿರ್ವಹಣೆ ಅಸಾಧ್ಯ" ಎಂದಿದೆ.
"ಈ ಹಿಂದೆಯೇ ನಕಲಿ ಟೆಸ್ಟಿಂಗ್, ಸ್ಯಾಂಪಲ್ಸ್ ಜಾಲ ಬೆಳಕಿಗೆ ಬಂದಿದ್ದರೂ ಕಠಿಣ ಕ್ರಮ ಕೈಗೊಳ್ಳಲಿಲ್ಲ ಭ್ರಷ್ಟ ಸರ್ಕಾರ. ಈಗ ಮಾಧ್ಯಮಗಳಲ್ಲಿ ಮತ್ತೊಮ್ಮೆ ಟೆಸ್ಟ್ ರಿಪೋರ್ಟ್ ಕರಾಳ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತ ಸೋಂಕಿತ ಸರ್ಕಾರದ ಬೇಜವಾಬ್ದಾರಿತನ, ಭ್ರಷ್ಟಾಚಾರವೇ ಈ ನಾಡಿಗೆ ಮಾರಕವಾಗಿದೆ" ಎಂದು ಹೇಳಿದೆ.
"ಸಚಿವರ ಹೆಸರಲ್ಲೂ ರಿಪೋರ್ಟ್, ಪಾಸಿಟಿವ್ ಬೇಕಿದ್ರೆ ಪಾಸಿಟಿವ್, ನೆಗೆಟಿವ್ ಬೇಕಿದ್ರೆ ನೆಗೆಟಿವ್, ಹಣ ಕೊಟ್ಟರೆ ಬೇಕಾದಂತ ರಿಪೋರ್ಟ್. ಅಧಿಕಾರಿಗಳೊಂದಿಗೆ ಸರ್ಕಾರ ಸೇರಿಕೊಂಡು ಕರೋನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ಸರ್ಕಾರವೇ ಸೋಂಕು ತಗುಲಿ ಸೋಂಕಿತ ಸರ್ಕಾರ ಆಗಿರುವಾಗ ಜನತೆಯ ಸೋಂಕು ದೂರಾಗಲು ಸಾಧ್ಯವೇ?" ಎಂದು ಪ್ರಶ್ನಿಸಿದೆ.
"ರಾಜ್ಯದಲ್ಲಿನ ಕರೋನಾ ವಾರಿಯರ್ಸ್ ಗೌರವಧನಕ್ಕೆ ಹಣವಿಲ್ಲ. ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಹಣವಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಲ್ಲದಕ್ಕೂ ಹಣವಿಲ್ಲ ಎಂದು ಸಬೂಬು ಹೇಳುವ ಸರ್ಕಾರ ಹೆಣಗಳ ರಾಶಿಯ ಮದ್ಯೆ ದುಬಾರಿ ಪ್ರಚಾರಕ್ಕೆ ಇಳಿದಿದೆ. ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಸಾಲ ಮಾಡಿಯಾದ್ರೂ ಪ್ರಚಾರ ಮಾಡಲು ಇಳಿದಿದೆ" ಎಂದು ಆರೋಪಿಸಿದೆ.
"ಕರೋನಾ ಟೆಸ್ಟಿಂಗ್ನಲ್ಲಿನ ವ್ಯಾಪಕ ಭ್ರಷ್ಟಾಚಾರದಲ್ಲಿ ಮತ್ರಿಗಳಿಗೆಷ್ಟು ಪಾಲು? ಅಧಿಕಾರಿಗಳಿಗೆ ಎಷ್ಟು ಪಾಲು? ನಿಮಗೆಷ್ಟು ಪಾಲು ಸಚಿವ ಸುಧಾಕರ್ ಅವರೇ? ಸೋಂಕಿತಸರ್ಕಾರ ಇದರಲ್ಲಿ ಶಾಮೀಲಾಗಿಲ್ಲ ಅಂದರೆ ಮಾಧ್ಯಮಗಳಲ್ಲಿ ಬರುವವರೆಗೂ ಏಕೆ ನಿಮ್ಮ ಗಮನಕ್ಕೆ ಬಂದಿಲ್ಲ? ನಿಮ್ಮ ಸರ್ಕಾರದ ಭ್ರಷ್ಟಾಚಾರ, ಬೇಜವಾಬ್ದಾರಿತನವೇ ಜನರ ಸಾವಿಗೆ ಹೊಣೆ" ಎಂದಿದೆ.
"ಸುಳ್ಳುಗಳಿಗೆ ಪೇಟೆಂಟ್ ಪಡೆದಿರುವ ಬಿಜೆಪಿ ಉತ್ತರಿಸಿ. ಸಚಿವ ಸುಧಾಕರ್ ಅವರೊಂದಿಗೆ ಸೇರಿಕೊಂಡು ಆಕ್ಸಿಜನ್ ಕೊರತೆಯೇ ಇಲ್ಲ ಎಂದು ಸಾವಿನ ಮನೆಯಲ್ಲಿ ಸುಳ್ಳು ಹೇಳುತ್ತಿದ್ದೀರಲ್ಲ, ಈಗ್ಯಾಕೆ ಸುಧಾಕರ್ ಅವರು ಆಕ್ಸಿಜನ್ ಪೂರೈಕೆಗೆ ಕೇಂದ್ರಕ್ಕೆ ಕೋರಿದರು? ಈಗ್ಯಾಕೆ ಕೊರತೆ ಇರುವುದನ್ನು ಒಪ್ಪಿಕೊಂಡರು?" ಎಂದು ಪ್ರಶ್ನಿಸಿದೆ.