ನವದೆಹಲಿ, ಏ 22 (DaijiworldNews/MS): ಕೋವಿಡ್ -19 ಹೊಸ ಲಸಿಕೆ ನೀತಿಯ ಕುರಿತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ಸರ್ಕಾರದ ನೀತಿಯನ್ನು ಅನಿಯಂತ್ರಿತ ಮತ್ತು ತಾರತಮ್ಯ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಲಸಿಕೆ ನೀತಿಯನ್ನು ಪುನರ್ ವಿಮರ್ಶೆ ಮಾಡಿ ಏಕ ರೂಪ ದರ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ.
ಹೊಸ ಲಸಿಕೆ ನೀತಿಯ ಮೂಲಕ 18 ರಿಂದ 45 ವರ್ಷದೊಳಗಿನ ಎಲ್ಲ ಭಾರತೀಯರಿಗೆ ಉಚಿತ ಲಸಿಕೆ ನೀಡುವ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣುಚಿಕೊಂಡಂತೆ ಕಾಣುತ್ತಿದೆ. ಕಳೆದ ವರ್ಷ ನಾವು ಕಲಿತ ಕಠಿಣ ಪಾಠಗಳು ಮತ್ತು ನಮ್ಮ ನಾಗರಿಕರಿಗೆ ಉಂಟಾದ ನೋವುಗಳ ಹೊರತಾಗಿಯೂ, ಸರ್ಕಾರವು ಅನಿಯಂತ್ರಿತ ಮತ್ತು ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವುದು ಆಶ್ಚರ್ಯಕರವಾಗಿದೆ ಒಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ,ಆಕ್ಸಿಜನ್ ಔಷಧಗಳ ಕೊರತೆ ಎದ್ದು ಕಾಣುತ್ತಿದೆ. ಇಂಥಾ ಸಂದರ್ಭದಲ್ಲಿ ಸರ್ಕಾರ ಲಸಿಕೆ ವಿಚಾರದಲ್ಲಿ ಈ ರೀತಿಯ ತಾರತಮ್ಯ ನೀತಿ ಅನುಸರಿಸುತ್ತಿರೋದು ಏಕೆ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿ ಹೇಳಿದೆ. ಇದಕ್ಕಾಗಿ ಸರ್ಕಾರವು ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ನಡುವೆ, ಕೊರೊನಾ ವೈರಸ್ ಲಸಿಕೆ ಉತ್ಪಾದಿಸುವ ಸೀರಮ್ ಇನ್ಸ್ಸ್ಟಿಟ್ಯೂಟ್ ಸಂಸ್ಥೆ ಕೂಡಾ ತನ್ನ ದರ ಪಟ್ಟಿ ಪ್ರಕಟಿಸಿದೆ.ಪ್ರತಿ ಡೋಸ್ ಲಸಿಕೆಗೆ ಕೇಂದ್ರ ಸರ್ಕಾರಕ್ಕೆ 150 ರೂ. ರಾಜ್ಯ ಸರ್ಕಾರಗಳಿಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ. ನಿಗದಿ ಮಾಡಿದೆ. ಹಾಗೆ ನೋಡಿದ್ರೆ, ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಲಸಿಕೆ ಪೈಕಿ ಶೇ. 50 ರಷ್ಟು ಕೇಂದ್ರ ಸರ್ಕಾರಕ್ಕೆ ಲಭ್ಯವಾಗುತ್ತೆ.
ಈ ವಿಚಾರವಾಗಿ ತಮ್ಮ ಆಕ್ಷೇಪ ಎತ್ತಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲಸಿಕೆಯ ದರ ನಿಗದಿಯಲ್ಲಿ ತಾರತಮ್ಯ ಏಕೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ಗೆ 400 ರೂ. ನಿಗದಿಪಡಿಸಿರೋದು ಏಕೆ ಎಂದು ಸವಾಲೆಸೆದಿದ್ದಾರೆ.