ನವದೆಹಲಿ, ಏ. 22(DaijiworldNews/HR): ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗುರುವಾರ ಒಂದೇ ದಿನದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಕೆ, ಲಸಿಕೆ ನೀಡುವಿಕೆ ಹಾಗೂ ಇನ್ನಿತರ ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ನಿಮ್ಮ ಯೋಜನೆಯ ಕುರಿತು ತಿಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಭಾರತದಾದ್ಯಂತ ಆರು ಹೈಕೋರ್ಟ್ಗಳು ಆಸ್ಪತ್ರೆಗಳಲ್ಲಿನ ಆಮ್ಲಜನಕ, ಹಾಸಿಗೆಗಳು ಮತ್ತು ಆಂಟಿ-ವೈರಲ್ ಔಷಧ ರೆಮ್ಡೆಸಿವಿರ್ನ ಬಿಕ್ಕಟ್ಟನ್ನು ಒಳಗೊಂಡ ಸಂಬಂಧಿತ ಅರ್ಜಿಗಳನ್ನು ವಿಚಾರಿಸುತ್ತಿರುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
ಇನ್ನು "ಆಕ್ಸಿಜನ್ ಪೂರೈಕೆ, ಅಗತ್ಯ ಔಷಧಗಳ ಪೂರೈಕೆ, ಲಸಿಕೆ ನೀಡುವಿಕೆಯ ವಿಧಾನ ಮತ್ತು ರೀತಿಗಳ ಕುರಿತಾದಂತೆ ನಾಲ್ಕು ವಿಷಯಗಳನ್ನು ನಾವು ತಿಳಿದುಕೊಳ್ಳಲು ಬಯಸುತ್ತಿದ್ದು, ದಿಲ್ಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕಲ್ಕತ್ತ ಮತ್ತು ಅಹ್ಮದಾಬಾದ್ ಹೈಕೋರ್ಟ್ ನ ನಿರ್ದಿಷ್ಟ ಪ್ರಕರಣಗಳನ್ನು ನಾವು ಸ್ವಯಂ ಕೈಗೆತ್ತಿಕೊಳ್ಳಲಿದ್ದೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.