ಹರಿಯಾಣ, ಎ.22 (DaijiworldNews/PY): ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಅಸ್ಪತ್ರೆಯಿಂದ 1,700 ಡೋಸ್ಗಳಷ್ಟು ಕೊರೊನಾ ಲಸಿಕೆ ಕಳವು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಆಸ್ಪತ್ರೆಯಿಂದ ಒಟ್ಟು 1,270 ಡೋಸ್ ಕೋವಿಶೀಲ್ಡ್ ಹಾಗೂ 440 ಕೋವಾಕ್ಸಿನ್ ಕಳವು ಮಾಡಲಾಗಿದೆ. ಅಲ್ಲದೇ, ಪ್ರಮುಖ ಕೆಲ ಕಡತಗಳು ಕಳವಾಗಿದೆ"ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಎಸ್ಎಚ್ಒ ರಾಜೇಂದರ್ ಸಿಂಗ್ ತಿಳಿಸಿದ್ದಾರೆ.
"ಆರೋಪಿಗಳು ಉಳಿದ ಲಸಿಕೆಗಳು, ಔಷಧಿ ಹಾಗೂ ನಗದನ್ನು ಮುಟ್ಟಿಲ್ಲ.ಕೊರೊನಾ ಡೋಸ್ಗಳನ್ನು ಕಳವು ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಹರಿಯಾಣದಲ್ಲಿ ಆಕ್ಸಿಜನ್ ಟ್ಯಾಂಕರ್ ಅನ್ನು ಲೂಟಿ ಮಾಡಲಾಗಿತ್ತು. ಪಾಣಿಮತ್ನಿಂದ ಫರೀದಾಬಾದ್ಗೆ ತೆರಳುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಆಕ್ಸಿಜನ್ ಟ್ಯಾಂಕರ್ ಅನ್ನು ಲೂಟಿ ಮಾಡಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.