ನವದೆಹಲಿ,ಏ 22 (DaijiworldNews/MS): ಭಾರತೀಯ ಇಸ್ಲಾಮಿಕ್ ವಿದ್ವಾಂಸ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ 96 ವರ್ಷದ ಮೌಲಾನಾ ವಾಹಿದುದ್ದೀನ್ ಖಾನ್ ಅವರು ಗುರುವಾರ ಕೊರೊನಾ ಸೋಂಕಿನಿಂದ ನಿಧನರಾದರು.
ಮೌಲಾನಾ ವಹಿದುದ್ದೀನ್ ಖಾನ್ ಸಾವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದು" ಮೌಲಾನಾ ವಹಿದುದ್ದೀನ್ ಖಾನ್ ಅವರ ನಿಧನದಿಂದ ಬೇಸರವಾಗಿದೆ. ಧರ್ಮಶಾಸ್ತ್ರ ಮತ್ತು ಆಧ್ಯಾತ್ಮಿಕ ವಿಚಾರಗಳ ಒಳನೋಟವುಳ್ಳ ಜ್ಞಾನ ಸ್ಮರಣೀಯ. ಸಮುದಾಯ ಸೇವೆ ಮತ್ತು ಸಾಮಾಜಿಕ ಸಬಲೀಕರಣದ ಬಗ್ಗೆಯೂ ಅವರು ಉತ್ಸುಕರಾಗಿದ್ದರು" ಎಂದು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಶ್ವದ 500 ಅತ್ಯಂತ ಪ್ರಭಾವಶಾಲಿ ಮುಸ್ಲಿಮರಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ವಾಹಿದುದ್ದೀನ್ ಖಾನ್ ಅವರು, ಮಾಜಿ ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರ ಆಶ್ರಯದಲ್ಲಿ ಖಾನ್ ಡೆಮಿಯುರ್ಗಸ್ ಪೀಸ್ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಪಡೆದಿದ್ದಾರೆ;
ಜನವರಿ 2000 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಮದರ್ ತೆರೇಸಾ ಪ್ರಸ್ತುತಪಡಿಸಿದ ರಾಷ್ಟ್ರೀಯ ನಾಗರಿಕರ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ,ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಅವರು "ಇಸ್ಲಾಂ ಧರ್ಮ, ಪ್ರವಾದಿಯ ಬುದ್ಧಿವಂತಿಕೆ, ಆಧ್ಯಾತ್ಮಿಕತೆ ಮತ್ತು ಬಹು-ಜನಾಂಗೀಯ ಸಮಾಜದಲ್ಲಿ ಸಹಬಾಳ್ವೆ" ಕುರಿತು 200 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಆಧುನಿಕತೆ ಮತ್ತು ಜಾತ್ಯತೀತತೆಯೊಂದಿಗೆ ಇಸ್ಲಾಂ ಧರ್ಮದ ಸಂಬಂಧಗಳ ಬಗ್ಗೆ ಬರೆದಿದ್ದಾರೆ.
ಕೊರೊನಾ ಸೋಕಿಗೆ ತುತ್ತಾಗಿದ್ದ ಅವರನ್ನು ಏಪ್ರಿಲ್ 12 ರಂದು ದೆಹಲಿಯ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಏ.22ರ ಗುರುವಾರ ನಿಧನರಾಗಿದ್ದಾರೆ. ಇವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೊವೀಂದ್ ಕಂಬನಿ ಮಿಡಿದಿದ್ದಾರೆ.