ನವದೆಹಲಿ, ಏ.22 (DaijiworldNews/MB) : ವಿವಾದದ ಮೂಲಕವೇ ಸದಾ ಸುದ್ದಿಯಾಗುವ ಸ್ವಯಂಘೋಷಿತ ದೇವ ಮಾನವ, ಕೈಲಾಸ ದೇಶ ಸ್ಥಾಪಕ ನಿತ್ಯಾನಂದ ಸ್ವಾಮಿ ತನ್ನ ದೇಶಕ್ಕೆ ಕೊರೊನಾ ಹಿನ್ನೆಲೆ ಭಾರತ ಸೇರಿದಂತೆ ಹಲವು ದೇಶಗಳ ಜನರಿಗೆ ಪ್ರವೇಶಕ್ಕೆ ನಿರ್ಬಂಧ ಹೇಳಿದ್ದಾರೆ.
ಕೈಲಾಸ ದೇಶಕ್ಕೆ ಭಾರತ, ಬ್ರೆಜಿಲ್, ಯುರೋಪ್ ಹಾಗೂ ಮಲೇಶಿಯಾದಿಂದ ಯಾರೂ ಬರುವಂತಿಲ್ಲ. ಕೊರೊನಾದಿಂದ ದೇಶವನ್ನು ರಕ್ಷಿಸಲು ಈ ಕ್ರಮ ಎಂದು ನಿತ್ಯಾನಂದ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾನು ದೇವಮಾನವ, ಶಿವನ ಅಪರಾವತಾರ, ಯಾವ ಚಮತ್ಕಾರ ಬೇಕಾದರೂ ಮಾಡಬಲ್ಲೆ ಎಂದು ಹೇಳಿಕೊಳ್ಳುವ ನಿತ್ಯಾನಂದ, ಕೊರೊನಾ ವೈರಸ್ ಬೆದರಿದ್ದಾರೆಯೇ ಎಂದು ವ್ಯಂಗ್ಯವಾಡಿರುವ ಕೆಲವು ನೆಟ್ಟಿಗರು, ಕೊರೊನಾ ಮಣಿಸಲು ನಿತ್ಯಾನಂದನ ಸಲಹೆ ಪಡೆಯಬೇಕು ಎಂದು ಲೇವಡಿ ಮಾಡಿದ್ದಾರೆ.
ಹಲವು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣಗಳ ಆರೋಪಿಯಾಗಿರುವ ನಿತ್ಯಾನಂದ 2019ರಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಬಳಿಕ ಭಾರತದಿಂದ ಪರಾರಿಯಾಗಿದ್ದಾನೆ. ಆ ನಂತರ ತಾನು ಈಕ್ವೇಡರ್ ಸಮೀಪದ ದ್ವೀಪವೊಂದನ್ನು ಖರೀದಿಸಿದ್ದೇನೆ. ರಾಷ್ಟ್ರವನ್ನಾಗಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ. ಅದರ ಹೆಸರು ಕೈಲಾಸ ಎಂದು ಹೇಳಿ ಅದಕ್ಕೆ ರಿಸರ್ವ್ ಬ್ಯಾಂಕ್ ಕೂಡಾ ಸ್ಥಾಪಿಸಿ ಕರೆನ್ಸಿ ಬಿಡುಗಡೆ ಮಾಡಿದ್ದಾನೆ. ಆದರೆ ಏತನ್ಮಧ್ಯೆ ಈಕ್ವೇಡರ್ ಸಮೀಪದ ಯಾವ ದ್ವೀಪವನ್ನು ಮಾರಾಟ ಮಾಡಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿತ್ತು.