ಬೆಂಗಳೂರು, ಎ.22 (DaijiworldNews/PY): ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದು, "ಇದು ಮೂರ್ಖ ಸರ್ಕಾರ. ಇನ್ನೂ ಕೂಡಾ ಇವರಿಗೆ ಬುದ್ದಿ ಬಂದಿಲ್ಲ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ವೈರಸ್ ಹೊಡೆತಕ್ಕೆ ರಾಷ್ಟ್ರವೇ ತತ್ತರಿಸಿದೆ. ಜನ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸೂತಕದ ಸಂದರ್ಭದಲ್ಲಿ ರಾಜ್ಯಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ನಗುಮೊಗದ ಜಾಹೀರಾತೊಂದನ್ನು ನೀಡಿದೆ. ಈ ಮೂಲಕ ಜನರ ನೋವನ್ನು ಗೇಲಿ ಮಾಡಿದೆ. ಇದು ನಿಜಕ್ಕೂ ಆತ್ಮಸಾಕ್ಷಿಯ ನಡೆಯಲ್ಲ!" ವಾಗ್ದಾಳಿ ನಡೆಸಿದ್ದಾರೆ.
"ಮೆಟ್ರೋ 2ನೇ ಹಂತದ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಿದ್ದನ್ನೇ ನೆಪ ಮಾಡಿಕೊಂಡು ಸರ್ಕಾರ ಪ್ರಚಾರಕ್ಕೆ ಧುಮುಕಿದೆ. ರಾಜ್ಯಕ್ಕೆ ಕೇಂದ್ರ ನೀಡುವ ಅನುದಾನವೇನು ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಅದರಲ್ಲಿ ಪ್ರಚಾರ ಪಡೆಯುವ, ಜಾಹೀರಾತು ನೀಡುವ ತುರ್ತು ಏನಿದೆ ಎಂಬುದನ್ನು ಸರ್ಕಾರ ಪರಾಮರ್ಶೆ ಮಾಡಬೇಕಿತ್ತು. ಇದು ಸರ್ಕಾರದ ಹೊಣೆಗೇಡಿತನ" ಎಂದಿದ್ದಾರೆ.
"ಸಮಾಜವೇ ಗಂಡಾಂತರದಲ್ಲಿ ಸಿಲುಕಿರುವಾಗ ಈ ಪ್ರಚಾರ ಪ್ರಿಯತೆ ಏಕೆ? ಜಾಹೀರಾತುಗಳಲ್ಲಿ ನೀವು ಬೀರುವ ನಗು ನೋವಿನಲ್ಲಿರುವವರನ್ನು ಅಣಕಿಸುತ್ತದೆ ಎಂಬ ಸೂಕ್ಷ್ಮತೆ ಇಲ್ಲವೇ? ಜಾಹೀರಾತುಗಳಿಗೆ ನೀಡುವ ಹಣವನ್ನು ವೈದ್ಯಕೀಯ ವ್ಯವಸ್ಥೆಗೆ ಬಳಸಿಕೊಂಡಿದ್ದಿದ್ದರೆ ಯಾರಾದರೂ ಬೇಡವೆನ್ನುತ್ತಿದ್ದರೆ? ಸರ್ಕಾರದ ಪ್ರಚಾರದ ಈ ಹುಚ್ಚು ನಾಚಿಕೆಗೇಡಿನದ್ದು" ಎಂದು ಕಿಡಿಕಾರಿದ್ದಾರೆ.
"ಸರ್ಕಾರ ಕೋವಿಡ್ ಅನ್ನು ನಿಭಾಯಿಸಿದ ರೀತಿ ಮತ್ತು ಅದರಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಬಗ್ಗೆ ಆರೋಪಗಳು ಬಂದವು. ಆದರೆ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರ ನೈತಿಕತೆ ಪ್ರಶ್ನೆ ಎದುರಿಸಬಾರದು ಎಂಬ ಕಾರಣಕ್ಕೆ ನಾವೆಲ್ಲರೂ ಸುಮ್ಮನಿದ್ದೆವು. ಆದರೆ, ಕಣ್ಣ ಮುಂದಿನ ಇಂಥ ಬೇಜವಾಬ್ದಾರಿತನ, ಪ್ರಚಾರಪ್ರಿಯತೆಯನ್ನು ಸಹಿಸಲಾಗದು" ಎಂದಿದ್ದಾರೆ.
"ಈ ದುರಿತ ಕಾಲದಲ್ಲಿ ಸರ್ಕಾರ ಜನರ ಪ್ರಾಣ ರಕ್ಷಣೆಗಾಗಿ ಪಣತೊಡಬೇಕೆ ಹೊರತು, ಪ್ರಚಾರದಲ್ಲಿ ತೊಡಗಬಾರದಿತ್ತು. ಬಿಜೆಪಿಯ ಪ್ರಚಾರ ಪ್ರಿಯತೆ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಈ ಸನ್ನಿವೇಶದಲ್ಲಾದರೂ ಅದನ್ನು ನಿಲ್ಲಿಸಿ ಮಾದರಿ ನಡೆ ಅನುಸರಿಸಬೇಕಿತ್ತು. ಜನರ ವಿಶ್ವಾಸ ಗೆಲ್ಲಿ, ಇಲ್ಲದೇ ಹೋದರೆ, ನಿಮ್ಮ ಪ್ರಚಾರಗಳೆಲ್ಲವೂ ಋಣವಾಗುತ್ತದೆ" ಎಂದು ತಿಳಿಸಿದ್ದಾರೆ.
"ಇದನ್ನು ಈ ಮೂರ್ಖ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಇಲ್ಲ. ಇದರೊಂದಿಗೆ ಆಕ್ಸಿಜನ್ ಕೊರತೆ ಇದೆ. ಔಷಧಿ ಕೂಡಾ ಇಲ್ಲ. ಜನ ಸಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಜಾಹೀರಾತು ನೀಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.