ಶಹಜಹಾನಪುರ, ಏ.22 (DaijiworldNews/MB) : ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ಲಕ್ನೊ-ಚಂಡೀಘಡ ಸೂಪರ್ ಫಾಸ್ಟ್ ಲೊಕೊಮೊಟಿವ್ ರೈಲು ಮ್ಯಾನಲ್ ಲೆವೆಲ್ ಕ್ರಾಸಿಂಗ್ನಲ್ಲಿ ವಾಹನಗಳ ಮೇಲೆ ಹರಿದು ಐವರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.
ರೈಲ್ವೆ ಹಳಿ ಸಮೀಪ ಮ್ಯಾನಲ್ ಲೆವೆಲ್ ಕ್ರಾಸಿಂಗ್ನಲ್ಲಿ ಗೇಟು ಮುಚ್ಚದ ಕಾರಣ ಈ ದುರ್ಘಟನೆ ಸಂಭವಿಸಿದ್ದು ಪ್ರಸ್ತುತ ಎರಡೂ ಕಡೆ ರೈಲು ಸಂಚಾರ ವ್ಯತ್ಯಯವಾಗಿದೆ. ರೈಲು ಎರಡು ಟ್ರಕ್, ಕಾರು ಮತ್ತು ಬೈಕ್ ಮೇಲೆ ಹರಿದಿದೆ ಎಂದು ವರದಿಯಾಗಿದೆ.
ಮೃತ ಪಟ್ಟ ಐವರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರೈಲ್ವೆ ಆಡಳಿತಾಧಿಕಾರಿಗಳು ತಿಳಿಸಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಇಂದ್ರ ವಿಕ್ರಮ್ ಸಿಂಗ್, ಸ್ಥಳಕ್ಕೆ ರೈಲ್ವೆ ಎಂಜಿನಿಯರ್ಗಳ ತಂಡ ಆಗಮಿಸಿದ್ದು ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದೆ. ಹಾನಿಗೀಡಾಗಿರುವ ಹಳಿಯ ಕೆಲಸ ನಡೆಯುತ್ತಿದೆ. ಮೂರ್ನಾಲ್ಕು ಗಂಟೆಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.