ಬೆಂಗಳೂರು, ಏ.21 (DaijiworldNews/MB) : ಕಳೆದ 15 ದಿನಗಳಿಂದ ಸಾರಿಗೆ ನೌಕರರು 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಡೆಸುತ್ತಿದ್ದ ಮುಷ್ಕರ ಬುಧವಾರ ಅಂತ್ಯವಾಗಿದೆ. ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ''ಸಂಜೆಯಿಂದಲೇ ಬಸ್ಸುಗಳ ಸಂಚಾರ ಆರಂಭವಾಗಿದೆ. ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದೆ'' ಎಂದು ತಿಳಿಸಿದ್ದಾರೆ.
ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಹೈಕೋರ್ಟ್ ಆದೇಶ ಗೌರವಿಸಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಕೊರೊನಾ ಕಾರಣದಿಂದಾಗಿ ಮುಷ್ಕರ ನಡೆಸದೆ ಕರ್ತವ್ಯಕ್ಕೆ ಹಾಜರಾಗಲು ನ್ಯಾಯಮೂರ್ತಿಗಳ ಸೂಚಿಸಿದ್ದಾರೆ. ಅವರ ಸೂಚನೆಗೆ ಗೌರವ ನೀಡಿ ಹೈಕೋರ್ಟ್ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ'' ಎಂದು ತಿಳಿಸಿದರು.
''ಮುಷ್ಕರದ ವೇಳೆ 2169 ನೌಕರರನ್ನು ವಜಾ, 2941 ನೌಕರರನ್ನು ಅಮಾನತು ಮಾಡಿದೆ. 7646 ನೌಕರರಿಗೆ ಶೋಕಾಸ್ ನೋಟಿಸ್ ನೀಡಿದೆ. 8 ಸಾವಿರ ನೌಕರರನ್ನು ವರ್ಗಾವಣೆ ಮಾಡಿದೆ. ರಾಜ್ಯ ಸರ್ಕಾರ ಈ ಎಲ್ಲಾ ನಿರ್ಧಾರಗಳನ್ನು ಹಿಂಪಡೆಯಬೇಕು. ನೌಕರರ ವಿರುದ್ಧ ಕೈಗೊಂಡ ಕ್ರಮಗಳನ್ನು ಕೈಬಿಡಬೇಕು'' ಎಂದು ಆಗ್ರಹಿಸಿದರು.