ಬೆಂಗಳೂರು, ಏ.21 (DaijiworldNews/MB) : ಕಾಂಗ್ರೆಸ್ ಅನ್ನು ಸುಳ್ಳು ಸುದ್ದಿಯ ಕಾರ್ಖಾನೆ ಎಂದು ಹೇಳಿರುವ ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಸುಳ್ಳುಗಳು ನಿಮ್ಮ ಪೇಟೆಂಟ್ ಅಲ್ಲವೇ ಬಿಜೆಪಿಗರೇ ಎಂದು ವ್ಯಂಗ್ಯವಾಡಿದೆ.
''ಪಿಎಂಜಿಕೆವೈ ಅಡಿ ಜಾರಿಗೊಳಿಸಿದ್ದ ಕೋವಿಡ್ ಆರೋಗ್ಯ ಕಾರ್ಯಕರ್ತರ ವಿಮೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಸುಳ್ಳು ಸುದ್ದಿಯ ಕಾರ್ಖಾನೆ ಕಾಂಗ್ರೆಸ್ ಹೇಳಿತ್ತು. ಮೋದಿ ಸರ್ಕಾರ ವಿಮೆಯನ್ನು ಮುಂದಿನ ವರ್ಷದವರೆಗೂ ವಿಸ್ತರಿಸಿದೆ. ಜನರು ಸಂಕಷ್ಟದಲ್ಲಿರುವಾಗಲೂ ಸುಳ್ಳನ್ನೇ ಕಾಂಗ್ರೆಸ್ ನೆಚ್ಚಿಕೊಂಡಿರುವುದು ಅಪಾಯಕಾರಿ ನಡೆ'' ಎಂದು ಬಿಜೆಪಿಯು ಕಾಂಗ್ರೆಸ್ ವಿರುದ್ದ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ''ಸುಳ್ಳುಗಳು ನಿಮ್ಮ ಪೇಟೆಂಟ್ ಅಲ್ಲವೇ ಬಿಜೆಪಿಗರೇ'' ಎಂದು ಪ್ರಶ್ನಿಸಿದ್ದು, ''ವಿಸ್ತರಿಸುತ್ತಿದ್ದೇವೆ ಎನ್ನುತ್ತಿದ್ದಿರಿ, ಸ್ಥಗಿತಗೊಂಡಿತ್ತು ಎನ್ನುವುದನ್ನ ಪರೋಕ್ಷವಾಗಿ ಒಪ್ಪಿಕೊಂಡಿದ್ದಿರಲ್ಲವೇ. ಇದುವರೆಗೂ ಎಷ್ಟು ಮಂದಿಗೆ ಆ ವಿಮೆ ಸೌಲಭ್ಯ ದೊರಕಿದೆ? ರಾಜ್ಯದಲ್ಲಿ ಎಷ್ಟು ಕುಟುಂಬಗಳು ಸೌಲಭ್ಯ ಪಡೆದಿವೆ? ಹೇಳಲು ಸಾಧ್ಯವೇ?'' ಉತ್ತರಿಸಿ ಎಂದು ಹೇಳಿದೆ.