ಕೊಲ್ಲಂ, ಎ.21 (DaijiworldNews/PY): 44 ವರ್ಷದ ವ್ಯಕ್ತಿಯನ್ನು ಆತನ ಸಹೋದರನೇ ಹತ್ಯೆ ಮಾಡಿದ್ದು, ತಾಯಿಯ ಸಹಾಯದಿಂದ ಶವವನ್ನು ಹೂತಿದ್ದ ಘಟನೆ 3 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಶಾಜಿ ಪೀಟರ್ (44) ಎಂದು ಗುರುತಿಸಲಾಗಿದೆ.
ಶಾಜಿ ಪೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳವಣಿಗೆಯೊಂದರಲ್ಲಿ, ಕೊಲ್ಲಂನ ಭಾರತಿಪುರಂನಿಂದ ಪೊಲೀಸರು ಬುಧವಾರ ಕೆಲ ಮೂಳೆ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಪಡೆದ ಸುಳಿವಿನ ಆಧಾರದ ಮೇಲೆ ಆರೋಪಿಗಳನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾರತಿಪುರಂ ತೊಟ್ಟಮ್ಮುಕ್ಕು ಚರ್ಚ್ ಮೇಲಿನ ಮನೆಯಲ್ಲಿ ಶಾಜಿ ಪೀಟರ್ ಅವರ ಶವ ಪತ್ತೆಯಾಗಿತ್ತು. ಯಾವುದೇ ದುರ್ವಾಸನೆ ಬಾರದಂತೆ ಹಾಳೆ ಹಾಗೂ ಕಾಂಕ್ರೀಟ್ನಿಂದ ಮುಚ್ಚಲಾಗಿತ್ತು. ಫೋರೆನ್ಸಿಕ್ ತಜ್ಞರ ಸಹಾಯದಿಂದ ಪೊಲೀಸರು ಕಾಂಕ್ರೀಟ್ ಒಡೆದು ತಪಾಸಣೆ ನಡೆಸಿದರು. ಬಳಿಕ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಮೂಳೆ ತುಣುಕುಗಳನ್ನು ಹಾಗೂ ಚೀಲವನ್ನು ವಶಪಡಿಸಿಕೊಂಡಿದ್ದಾರೆ.
"ಮೂಳೆಗಳ ಹೆಚ್ಚಿನ ಪರಿಶೀಲನೆಯ ಬಳಿಕವೇ ಅವುಗಳು ಶಾಜಿ ಸೇರಿದವೋ ಅಥವಾ ಇಲ್ಲವೋ ಎನ್ನುವದನ್ನು ಖಚಿತಪಡಿಸಬಹುದು" ಎಂದು ಪೊಲೀಸರು ತಿಳಿಸಿದ್ದಾರೆ.
2018ರಲ್ಲಿ ಓಣಂ ಸಮಯದಲ್ಲಿ ಈ ಹತ್ಯೆ ನಡೆದಿದೆ. ಶಾಜಿ ಪೀಟರ್ ಅವಿವಾಹಿತರಾಗಿದ್ದು ಹಾಗೂ ಮನೆಯಿಂದ ದೂರವಾಗಿದ್ದ. 2018ರಲ್ಲಿ ಅವರು ತಮ್ಮ ಪೂರ್ವಜರ ಮನೆಗೆ ಬಂದಿದ್ದರು. ಈ ವೇಳೆ ಶಾಜಿ ತನ್ನ ಅಣ್ಣ ಸಾಜಿನ್ ಅವರ ಹೆಂಡತಿಯೊಂದಿಗೆ ಕೆಟ್ಟದಾಗಿ ವರ್ತಿಸಿದ ಆರೋಪದ ಬಳಿಕ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಸಾಜಿನ್ ಕಬ್ಬಿಣದ ರಾಡ್ನಿಂದ ಶಾಜಿಯ ತಲೆಗೆ ಹೊಡೆದಿದ್ದು, ಬಳಿಕ ತಾಯಿ ಹಾಗೂ ಹೆಂಡತಿಯ ಸಹಾಯದಿಂದ ಶವವನ್ನು ಅವರ ಮನೆಯ ಸಮೀಪದ ಹೊಲವೊಂದರಲ್ಲಿ ಹೂತಿದ್ದರು.