ನವದೆಹಲಿ, ಏ.21 (DaijiworldNews/MB) : ಮಹಾರಾಷ್ಟ್ರದ ನಾಸಿಕ್ನ ಆಸ್ಪತ್ರೆಯೊಂದರ ಹೊರಗೆ ಮಂಗಳವಾರ ಆಮ್ಲಜನಕದ ಟ್ಯಾಂಕರ್ ಸೋರಿಕೆಯಾದ ಕಾರಣ ಆಕ್ಸಿಜನ್ ಕೊರತೆಯಿಂದಾಗಿ 22 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾದ ಪರಿಣಾಮ ಸುಮಾರು 30 ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿತ್ತು.
ಕೊರೊನಾ ಸೋಂಕಿತರಿಗಾಗಿ ಮೀಸಲಾಗಿರುವ ನಗರದ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸುಮಾರು 150 ಕೊರೊನಾ ರೋಗಿಗಳನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಮೃತರೆಲ್ಲರಿಗೂ ವೆಂಟಿಲೇಟರ್ ಇರಿಸಲಾಗಿತ್ತು. ಅವರಿಗೆ ನಿರಂತರ ಆಮ್ಲಜನರದ ಪೂರೈಕೆಯೂ ಅತ್ಯಗತ್ಯವಾಗಿತ್ತು.
ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ, ಆಮ್ಲಜನಕದ ಪೂರೈಕೆ ಸ್ಥಗಿತವೇ ಸಾವಿಗೆ ಕಾರಣವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ನಾಸಿಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿದ್ದ ರೋಗಿಗಳು ಸಾವನ್ನಪ್ಪಿದ್ದಾರೆ. ಈ ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದ್ದ ಆಮ್ಲಜನಕ ಟ್ಯಾಂಕರ್ನಲ್ಲಿ ಸೋರಿಕೆ ಕಂಡುಬಂದಿದೆ. ಈ ಹಿನ್ನೆಲೆ ಆಮ್ಲಜನಕ ಲಭಿಸದೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಟ್ಯಾಂಕರ್ನಿಂದ ವೇಗವಾಗಿ ಅನಿಲ ಸೋರಿಕೆಯಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಳಿ ಹೊಗೆ ಆವರಿಸಿರುವುದೆ. ಇನ್ನು ಆಮ್ಲಜನಕದ ಪೂರೈಕೆ ಸ್ಥಗಿತವಾದ್ದರಿಂದ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಿ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಸಹಾಯ ಮಾಡುವ ಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿಗಳು ಆಗಮಿಸಿದ್ದು ಸೋರಿಕೆ ನಿಯಂತ್ರಿಸಲು ಕಾಯಚರಣೆ ನಡೆಸಲಾಗುತ್ತಿದೆ. ಆಮ್ಲಜನಕ ಅಗತ್ಯವಿರುವ 80 ರೋಗಿಗಳ ಪೈಕಿ 31 ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.