ನವದೆಹಲಿ, ಏ 21(DaijiworldNews/MS): ದೇಶದಲ್ಲಿ ಸೋಂಕು ಕ್ಷಿಪ್ರವಾಗಿ ಮತ್ತು ಮಾರಣಾಂತಿಕವಾಗಿ ವ್ಯಾಪ್ತಿಸುತ್ತಿರುವುದಕ್ಕೆ ಅವಳಿ ರೂಪಾಂತರಿ ( ಡಬಲ್ ಮ್ಯುಟೆಂಟ್) ವೈರಾಣು ಕಾರಣವಾಗಿದ್ದು ಇದನ್ನು ತಡೆಯಲು ಕೋವಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬುಧವಾರ ತಿಳಿಸಿದೆ.
ಡಬಲ್ ಮ್ಯುಟೆಂಟ್ ಎಂದರೇನು ಮತ್ತು ಅಪಾಯಕಾರಿಯೇ?
ಕೊವೀಡ್ ನ ರೂಪಾಂತರಿತ ಡಬಲ್ ಮ್ಯುಟೆಂಟ್ ವೈರಸ್ನಿಂದಾಗಿ ದೇಶಾದ್ಯಂತ ಈ ರೀತಿ ವೇಗವಾಗಿ ಸೋಂಕು ಹಬ್ಬುತ್ತಿದೆ. ಇದು ಕ್ಷಿಪ್ರವಾಗಿ ಹರಡುತ್ತದೆ ಮಾತ್ರವಲ್ಲ, ಅದನ್ನು ತಟಸ್ಥಗೊಳಿಸುವುದೂ ಕಷ್ಟ ಎಂದು ಈ ಹಿಂದೆ ವರದಿ ತಿಳಿಸಿತ್ತು. ವೈರಸ್ನ ಇ 484 ಕ್ಯೂ ಮತ್ತು ಎಲ್ 452 ಆರ್ ಎಂಬ ಎರಡು ಸ್ವರೂಪಗಳು ಸೇರಿ ಸೃಷ್ಟಿಯಾದ ಹೊಸ ರೂಪಾಂತರಿ ಬಿ.1.617. ಈ ಪೈಕಿ ಎಲ್452ಆರ್ ಮೊದಲು ಕಂಡುಬಂದದ್ದು ಅಮೆರಿಕದಲ್ಲಿ. ಆದರೆ ಇ484ಕ್ಯೂ ಸೃಷ್ಟಿಯಾದದ್ದು ಭಾರತದಲ್ಲಿ. ಇವೆರಡೂ ಸೇರಿ ಈಗ ಭಾರತದಲ್ಲಿ ಸೋಂಕು ಸ್ಫೋಟಗೊಳ್ಳುವಂತೆ ಮಾಡುತ್ತಿವೆ. ಆರಂಭದಲ್ಲಿ ಮಹಾರಾಷ್ಟ್ರ, ಪಂಜಾಬ್ ಮತ್ತು ದಿಲ್ಲಿಯ ಸೋಂಕುಪೀಡಿತರ ಮಾದರಿಗಳಲ್ಲಿ ಈ ಅವಳಿ ರೂಪಾಂತರಿ ಪತ್ತೆಯಾಗಿತ್ತು. ಈಗ ಇದು ಕರ್ನಾಟಕ ಸೇರಿ 10 ರಾಜ್ಯಗಳಿಗೆ ಹಬ್ಬಿದೆ.
ದೇಶಿಯ ಕೋವಿಡ್ -19 ಲಸಿಕೆ ಕೊವಾಕ್ಸಿನ್ SARS-CoV-2 ನ ಅನೇಕ ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ ಮತ್ತು ಡಬಲ್ ಮ್ಯುಟೆಂಟ್ ಒತ್ತಡವನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬುಧವಾರ ತಿಳಿಸಿದೆ.
ಕೊವ್ಯಾಕ್ಸಿನ್ ಲಸಿಕೆ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುವಂತೆ ಹೆಚ್ಚು ವೈರಲ್ ಆ್ಯಂಟಿಜೆನ್ಒದಗಿಸುತ್ತದೆ. ಹೀಗಾಗಿ ಇದು ರೂಪಾಂತರಿ ವಿರುದ್ಧ ಪರಿಣಾಮಕಾರಿ ಎನ್ನಲಾಗಿದೆ.