ನವದೆಹಲಿ, ಏ.21 (DaijiworldNews/MB) : ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ತನ್ನ ಕೋವಿಶೀಲ್ಡ್ ಕೊರೊನಾ ಲಸಿಕೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 600 ರೂ. ವಿಧಿಸುವುದಾಗಿ ಹೇಳಿದೆ.
''ಸಂಸ್ಥೆಯು ತನ್ನ ಶೇಕಡಾ 50 ರಷ್ಟು ಲಸಿಕೆ ಉತ್ಪಾದನೆಯನ್ನು ಭಾರತ ಸರ್ಕಾರದ ಲಸಿಕಾ ಅಭಿಯಾನಕ್ಕೆ ನೀಡಲಿದೆ ಹಾಗೂ ಉಳಿದ ಶೇಕಡಾ 50 ರಷ್ಟು ಲಸಿಕೆ ಉತ್ಪಾದನೆಯನ್ನು ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೀಡಲಿದೆ'' ಎಂದು ತಿಳಿಸಿದೆ.
"ಮುಂದಿನ ಎರಡು ತಿಂಗಳುಗಳವರೆಗೆ, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನಾವು ಲಸಿಕೆಯ ಕೊರತೆ ನಿವಾರಿಸುತ್ತೇವೆ'' ಎಂದು ಕೂಡಾ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ''ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಇತರೆ ದೇಶದ ಲಸಿಕೆಗಳಿಗಿಂತ ಕಡಿಮೆ ದರದಲ್ಲಿ ಲಸಿಕೆ ನೀಡುತ್ತಿದೆ. ಉದಾಹರಣೆಗೆ, ಅಮೇರಿಕಾದ ವಾಕ್ಸಿನ್ಗೆ ಪ್ರತಿ ಡೋಸ್ಗೆ, 1,500 ಕ್ಕಿಂತ ಹೆಚ್ಚು ವಿಧಿಸಲಾಗುತ್ತದೆ. ರಷ್ಯಾದ ಲಸಿಕೆಗೆ ಪ್ರತಿ ಡೋಸ್ಗೆ 750 ಕ್ಕಿಂತ ಅಧಿಕವಾಗಿದೆ. ಚೀನೀ ಲಸಿಕೆಗಳ ಬೆಲೆ 750 ಆಗಿದೆ'' ಎಂದು ಸೀರಮ್ ಸಂಸ್ಥೆ ತಿಳಿಸಿದೆ.
ಮೇ 1 ರಿಂದ ಕೋವಿಡ್ ಲಸಿಕೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದ್ದರೂ, ಇದು ಔಷಧಾಲಯಗಳಲ್ಲಿ ಮಾರಾಟಕ್ಕೆ ಲಭ್ಯವಿರುವುದಿಲ್ಲ. ಆಸ್ಪತ್ರೆಗಳು ಮತ್ತು ಅನುಮೋದಿತ ವ್ಯಾಕ್ಸಿನೇಷನ್ ಕೇಂದ್ರಗಳು ಮಾತ್ರ ಲಸಿಕೆಗಳನ್ನು ನೀಡಲಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಬಹುದಾಗಿದೆ.