ಬೆಂಗಳೂರು, ಎ.21 (DaijiworldNews/PY): "ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ಚೈನ್ ಲಿಂಕ್ ಮುರಿಯಲು 14 ದಿನಗಳ ಕಾಲ ಕಠಿಣ ನಿಯಮ ಜಾರಿ ಮಾಡಲಾಗಿದೆ. ಜನರು ಮಾರ್ಗಸೂಚಿಯ ಅನ್ವಯ ನಡೆದುಕೊಳ್ಳಬೇಕು" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ತೀರ್ಮಾನಗಳನ್ನು ತೆಗೆದುಕೊಂಡಿದೆ. ಸರ್ವ ಪಕ್ಷಗಳ ಸಭೆಯ ನಂತರ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ರವರೆಗೆ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ" ಎಂದು ತಿಳಿಸಿದ್ದಾರೆ.
"ಕೊರೊನಾ ಚೈನ್ ಲಿಂಕ್ ಮುರಿಯಲು ದಿನಗಳು ಬೇಕಾಗಿದೆ. ಆದ್ದರಿಂದ ಸರ್ಕಾರ 14 ದಿನಗಳ ಬಿಗಿ ಕ್ರಮಕ್ಕೆ ಒತ್ತು ನೀಡಿದೆ" ಎಂದಿದ್ದಾರೆ.
"ಕೊರೊನಾ ಸೋಂಕಿತರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಈಗಾಗಲೇ ಮಾಡಲಾಗುತ್ತಿದೆ. ರೆಮ್ಡಿಸಿವರ್, ಐಸಿಯು ಸೇರಿದಂತೆ ಬೆಡ್, ಆಕ್ಸಿಜನ್ ಲಭ್ಯತೆಯನ್ನು ಹೆಚ್ಚು ಮಾಡಲು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ವೈದ್ಯಕೀಯ ಸಿಬ್ಬಂದಿಗಳಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ವೇತನ, ಜವಾಬ್ದಾರಿಯನ್ನು ನೀಡುತ್ತೇವೆ" ಎಂದು ತಿಳಿಸಿದ್ದಾರೆ.