ಅಸ್ಸಾಂ, ಎ.21 (DaijiworldNews/PY): ಶಿವಸಾಗರ್ ಜಿಲ್ಲೆಯ ಒಎನ್ಜಿಸಿ ಕಾರ್ಖಾನೆಗೆ ನುಗ್ಗಿದ ಶಸ್ತ್ರಸಜ್ಜಿತ ಕೆಲವು ದುಷ್ಕರ್ಮಿಗಳು ಮೂವರು ನೌಕರರನ್ನು ಅಪಹರಿಸಿರುವ ಘಟನೆ ಎಪ್ರಿಲ್ 21ರ ಬುಧವಾರ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಕಾರ್ಖಾನೆಗೆ ನುಗ್ಗಿದ ಶಸ್ತ್ರಸಜ್ಜಿತ ಕೆಲ ದುಷ್ಕರ್ಮಿಗಳು ಇಬ್ಬರು ಜೂನಿಯರ್ ಎಂಜಿನಿಯರ್ಗಳು ಸೇರಿದಂತೆ ಓರ್ವ ಟೆಕ್ನೀಷಿಯನ್ ಅನ್ನು ಒಎನ್ಜಿಸಿಯ ಕಾರಿನಲ್ಲಿ ಅಪಹರಿಸಿದ್ದು, ಅಸ್ಸಾಂ ಹಾಗೂ ನಾಗಾಲ್ಯಾಂಡ್ನ ಗಡಿ ಸಮೀಪದ ಅರಣ್ಯಕ್ಕೆ ಕರೆದೊಯ್ಯಲಾಗಿದೆ.
"ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ" ಎಂದು ಒಎನ್ಜಿಸಿಯ ಅಧಿಕಾರಿಗಳು ಹೇಳಿದ್ದಾರೆ.
ನಕ್ಸಲರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಅಪಹರಣಗೊಂಡಿರುವ ವಾಹನ ಕೂಡಾ ಪತ್ತೆಯಾಗಿದೆ.
"ಇಲ್ಲಿ ಕಳೆದ 1960ರಿಂದ ಒಎನ್ಜಿಸಿ ಕಾರ್ಖಾನೆ ನಡೆಯುತ್ತಿದ್ದು, ಈ ರೀತಿಯಾದ ಘಟನೆಗಳು ನಡೆದಿರಲಿಲ್ಲ. ಆದರೆ, ಇದೀಗ ಈ ಬಗ್ಗೆ ಶಂಕೆ ಮೂಡಿದ್ದು, ನಮ್ಮ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಲ್ಲಿ ಎಲ್ಲಾ ರೀತಿಯಾದ ಕ್ರಮ ತೆಗೆದುಕೊಳ್ಳಲಾಗಿದೆ" ಎಂದಿದ್ದಾರೆ.