ಇಂದೋರ್, ಎ.21 (DaijiworldNews/PY): "ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ರಾಶಿ ರಾಶಿ ಶವಗಳನ್ನು ತೋರಿಸುವ ಮಾಧ್ಯಮಗಳ ವರದಿಯಿಂದ ಭೀತಿ ಹುಟ್ಟಿಸುತ್ತಿವೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಮಂಗಳವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಎನ್ಜಿಒಗಳು ಮತ್ತು ಇತರ ಕ್ಷೇತ್ರಗಳ ಜನರು ಕೊರೊನಾ ಸೋಂಕಿತ ಜನರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ರಾಶಿ ರಾಶಿ ಶವಗಳನ್ನು ತೋರಿಸುತ್ತಿದ್ದರೆ ಜನರಲ್ಲಿ ಭೀತಿ ಸೃಷ್ಟಿಸುತ್ತದೆ. ಹಾಗಾಗಿ ಜನರಿಗೆ ಕೊರೊನಾ ಪೀಡಿತ ಜನರಿಗೆ ಸೇವೆ ಸಲ್ಲಿಸುತ್ತಿರುವವರ ಸಕಾರಾತ್ಮಕ ಕಥೆಗಳನ್ನು ಕೂಡಾ ತೋರಿಸಬೇಕು" ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದ್ದಾರೆ.
"ಇತಿಹಾಸವನ್ನು ಒಮ್ಮೆ ನೋಡಿದರೆ, ಪ್ರತೀ 100 ವರ್ಷಗಳಿಗೊಮ್ಮೆ ಸಾಂಕ್ರಾಮಿಕ ರೋಗ ಬರುತ್ತದೆ. ಅಂತಹ ವೇಳೆಯಲ್ಲಿ ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿಗೆಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಮಾಧ್ಯಮಗಳನು ಜನರಿಗೆ ತೋರಿಸಬೇಕು" ಎಂದಿದ್ದಾರೆ.
"ಅನೇಕ ವೈದ್ಯಕೀಯೇತರ ವ್ಯಕ್ತಿಗಳು ಹಾಗೂ ಎನ್ಜಿಒಗಳು ಸಹ ಕೊರೊನಾ ಸೋಂಕಿತರ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಸಹ ಸಾರ್ವಜನಿಕರಿಗೆ ತೋರಿಸಬೇಕು. ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಅಗತ್ಯವಾಗಿದೆ" ಎಂದು ತಿಳಿಸಿದ್ದಾರೆ.