ನವದೆಹಲಿ, ಏ. 20 (DaijiworldNews/SM): ದೇಶದ ಯಾವುದೇ ರಾಜ್ಯಗಳಲ್ಲಿ ಏಕಾಏಕಿ ಲಾಕ್ ಡೌನ್ ಮಾಡುವುದು ಬೇಡ. ಲಾಕ್ ಡೌನ್ ನಿಂದ ದೇಶವನ್ನು ಪಾರು ಮಾಡಬೇಕಾಗಿದ್ದು, ಎಲ್ಲರು ಇದಕ್ಕೆ ಸಹಕಾರ ನೀಡಬೇಕು. ಲಾಕ್ ಡೌನ್ ಅಂತಿಮ ಅಸ್ತ್ರವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುವಕರು ಕೊರೋನಾ ಹೋರಾಟದಲ್ಲಿ ಕೈ ಜೋಡಿಸಬೇಕಾಗಿದೆ. ಲಾಕ್ ಡೌನ್ ನಿರ್ಧಾರವನ್ನು ಅಂತಿಮ ಅಸ್ತ್ರವಾಗಿ ಬಳಸಲು ಎಲ್ಲಾ ರಾಜ್ಯಗಳಿಗೂ ನಾನು ಮನವಿ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಪ್ರಸ್ತುತ ನಾವು ಕೈಗೊಂಡ ಕ್ರಮದಿಂದಾಗಿ ಲಾಕ್ ಡೌನ್ ಅಗತ್ಯವೇ ಇಲ್ಲ. ಕಳೆದ ಬಾರಿಗಿಂತ ಈ ಬಾರಿ ನಾವು ಸುಧಾರಿಸಿಕೊಂಡಿದ್ದೇವೆ. ಅನಗತ್ಯವಾಗಿ ಮನೆಯಿಂದ ಯಾರೂ ಕೂಡ ಹೊರಬರಬೇಡಿ. ಗುಳೆ ಹೋಗುವ ನಿರ್ಧಾರಕ್ಕೂ ಮುಂದಾಗಬೇಡಿ. ಇವತ್ತು ದೇಶವನ್ನು ಲಾಕ್ ಡೌನ್ ನಿಂದ ಉಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೇಶದಲ್ಲಿ ಆಕ್ಸಿಜನ್ ಪೂರೈಕೆ ಹೆಚ್ಚಿಸಲಾಗುತ್ತಿದೆ. ಅದರ ಜೊತೆಗೆ ಲಸಿಕೆ ಉತ್ಪಾದನೆ ಕೂಡ ಹೆಚ್ಚಿಸಲಾಗಿದೆ. ಅಲ್ಲದೆ, ದೇಶದಲ್ಲಿರುವ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಕಡಿಮೆ ಸಮಯದಲ್ಲಿ ಲಸಿಕೆ ಪತ್ತೆ ಹಚ್ಚಲಾಗಿದೆ. ಅತೀ ಕಡಿಮೆ ದರದಲ್ಲಿ ಎರಡು ಲಸಿಕೆಗಳ ವಿತರಣೆ ಮಾಡಲಾಗಿದೆ. ವಿಶ್ವದಲ್ಲೇ ನಮ್ಮ ದೇಶ ವೇಗವಾಗಿ ಲಸಿಕೆ ನೀಡಿದೆ. ದೇಶದಲ್ಲಿ ಉತ್ಪಾದನೆಯಾದ ಲಸಿಕೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಜನರ ಜೀವ ಉಳಿಸೋದಷ್ಟೇ ನಮ್ಮ ಗುರಿಯಾಗಿದೆ ಎಂದಿರುವ ಪ್ರಧಾನಿ ಮೋದಿ ತ್ವರಿತವಾಗಿ ಲಸಿಕೆ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.